ರಾಜ್ಯದೆಲ್ಲಡೆ ಅದ್ಧೂರಿಯಾಗಿ ಜರುಗಿದ ಯುಗಾದಿ ಹಬ್ಬ
ಬೆಂಗಳೂರು: ಹೊಸ ವರ್ಷ ಯುಗಾದಿ ಹಿನ್ನಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಬ್ಬದ ಕಳೆ ರಂಗೇರಿತ್ತು.
ದೇವಸ್ಥಾನಗಳು, ಮನೆಗಳು ತಳಿರು, ತೋರಣಗಳಿಂದ ಶೃಂಗಾರಗೊಂಡಿದ್ದವು. ದೇವಸ್ಥಾನಗಳಲ್ಲಿ ಪ್ರಾತಃ ಕಾಲದಲ್ಲಿಯೇ ಪೂಜ ಕೈಂಕರ್ಯಗಳು ಪ್ರಾರಂಭವಾಗಿದ್ದವು. ಮೈಸೂರಿನ ಚಾಮುಂಡಿ ಬೆಟ್ಟ, ಅರಮನೆ ಆಂಜನೇಯಸ್ವಾಮಿ ದೇಗುಲ, ನಂಜನಗೂಡಿನ ಶ್ರೀ ಶ್ರೀಕಂಠೇಶ್ವರ ಸ್ವಾಮಿ ದೇವಾಲಯ, ತಲಕಾಡಿನ ಶ್ರೀ ವೈದ್ಯನಾಥೇಶ್ವರ ಸ್ವಾಮಿ ಸಮೂಹ ದೇವಾಲಯ ಮುಂತಾದೆಡೆ ಬೆಳಿಗ್ಗೆ 5.30 ರಿಂದ ವಿಶೇಷ ಅಭಿಷೇಕ, ಪೂಜೆ, ಬೇವು ಬೆಲ್ಲ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು.
ಅಲ್ಲದೆ ಮೈಸೂರಿನ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಸಾವಿರಾರು ಭಕ್ತರು ಪುಣ್ಯಸ್ನಾನ ಮಾಡಿದ್ದಾರೆ. ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ವಿವಿಧ ಗ್ರಾಮಗಳಿಂದ ದೇವರ ವಿಗ್ರಹಗಳನ್ನ ತಂದು ಪೂಜೆ ಸಲ್ಲಿಕೆ ಮಾಡಲಾಗಿದೆ. ಮೈಸೂರು ತಾಲ್ಲೂಕಿನ ಹಿಮ್ಮಾವು ಗ್ರಾಮದ ಭೈರಪ್ಪ ಬಂಡಿ ಜಾತ್ರೆಯಲ್ಲಿ ಎತ್ತಿನ ಕೊಂಬುಗಳಲ್ಲಿ ಅಪ್ಪು ಮಿಂಚಿದ್ದಾರೆ! ಅಪ್ಪು ಭಾವಚಿತ್ರದ ಜೊತೆ ಜೋಡಿ ಎತ್ತುಗಳು ಸಾಗಿವೆ. ಬಲೂನ್ ಜೊತೆ ಅಪ್ಪು ಭಾವ ಚಿತ್ರ ಕಂಡುಬಂದಿದೆ. ಜಾತ್ರೆ ನೋಡಲು ಸಾವಿರಾರು ಭಕ್ತರ ದಂಡು ಬಂದಿದ್ದು ಹಬ್ಬದಲ್ಲಿ ಸಂಭ್ರಮಿಸಿದ್ದಾರೆ.
ಇನ್ನೂ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆ ಯುಗಾದಿಯನ್ನು ಸಡಗರದಿಂದ ಬೇವು- ಬೆಲ್ಲ ಸವಿದು ಬರಮಾಡಿಕೊಂಡಿದ್ದಾರೆ. ಐತಿಹಾಸಿಕ ಹುಬ್ಬಳ್ಳಿಯ ಉಣಕಲ್ನ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮುಂಜಾನೆಯ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸುವ ಗಳಿಗೆಯನ್ನು ಭಕ್ತರು ಕಣ್ಣು ತುಂಬಿಕೊಂಡಿದ್ದಾರೆ. ಶತಮಾನಗಳಷ್ಟು ಹಳೇಯಾದಾದ ಚಂದ್ರಮೌಳೇಶ್ವರ ದರ್ಶನ ಪಡೆದರೆ ಇಷ್ಟಾರ್ಥಗಳು ಈಡೇರುತ್ತದೆ ಎಂಬ ನಂಬಿಕೆ ಇದೆ.
ಹಾಗೇ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ರನ್ನ ಬೆಳಗಲಿಯ ಅಮೃತೇಶ್ವರ ದೇಗುಲದ ಲಿಂಗದ ಮೇಲೆ ಸೂರ್ಯೋದಯದ ಕಿರಣ ಸೋಕಿದೆ. ಕೆಲ ನಿಮಿಷಗಳವರೆಗೂ ಲಿಂಗದ ಮೇಲೆ ಸೂರ್ಯರಶ್ಮಿ ಕಾಣಿಸಿಕೊಂಡಿದೆ.








