ಪುತ್ತೂರು, ಮೇ 26 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರ ಸಂಚಾರ ಮತ್ತು ಮಹಿಳಾ ಪೊಲೀಸ್ ಠಾಣೆಯ ಒಟ್ಟು ಒಟ್ಟು 8 ಮಂದಿ ಪೊಲೀಸ್ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಪೊಲೀಸ್ ಠಾಣಾ ವ್ಯಾಪ್ತಿಗೆ ಸಂಬಂಧ ಪಟ್ಟಂತೆ ಹೊರರಾಜ್ಯದಿಂದ ಬಂದವರ, ಹೋಂ ಕ್ವಾರಂಟೈನ್ ಗೆ ಒಳಗಾದವರ ಮಾಹಿತಿ ಪಡೆಯುವ ಕೆಲಸದಲ್ಲಿ ನಿರತರಾಗಿದ್ದ ಮತ್ತು ಗುಂಡ್ಯ, ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರತರಾಗಿದ್ದ ಪೊಲೀಸ್ ಸಿಬ್ಬಂದಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಕೆಲವರಲ್ಲಿ ಗಂಟಲು ನೋವು, ಶೀತ, ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಮಹಿಳಾ ಪೊಲೀಸ್ ಠಾಣೆಯಲ್ಲಿ ಜ್ವರ, ಶೀತ ಬಾಧೆಗೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಪೊಲೀಸರು, ಸಂಚಾರ ಪೊಲೀಸ್ ಠಾಣೆಯ ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸಿದ ಒಬ್ಬ ಹಾಗೂ ಮಡಿಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಸಂಬಂಧಿಸಿ ಓರ್ವ ಸೇರಿದಂತೆ ಪುತ್ತೂರು ಠಾಣೆಯಲ್ಲಿ ಒಟ್ಟು 8 ಮಂದಿ ಪೊಲೀಸರನ್ನು ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ವಿಟ್ಲ ಪೊಲೀಸ್ ವಸತಿ ನಿಲಯದಿಂದ ಪುತ್ತೂರು ಠಾಣೆಯಲ್ಲಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಸಿಬ್ಬಂದಿಗಳಿಗೂ 14 ದಿನಗಳ ಹೋಂಕ್ವಾರಂಟೈನ್ ಸೂಚಿಸಲಾಗಿದೆ.








