ಗ್ರ್ಯಾಮಿ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ಫಲ್ಗುಣಿ ಶಾ ಅವರನ್ನ ಅಭಿನಂದಿಸಿದ ಮೋದಿ
ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದ ನ್ಯೂಯಾರ್ಕ್ ಮೂಲದ ಭಾರತೀಯ ಗಾಯಕ ಫಲ್ಗುಣಿ ಶಾ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಅಭಿನಂದಿಸಿದ್ದಾರೆ. ಫಾಲು ಎಂಬ ಹೆಸರಿನಿಂದ ಕರೆಯಲ್ಪಡುವ ಇವರು ಅತ್ಯುತ್ತಮ ಮಕ್ಕಳ ಆಲ್ಬಮ್ ವಿಭಾಗದಲ್ಲಿ ‘ಎ ಕಲರ್‌ಫುಲ್ ವರ್ಲ್ಡ್’ ಪ್ರಶಸ್ತಿಯನ್ನು ಗೆದ್ದಿದ್ದಾರೆ.
“ಗ್ರ್ಯಾಮಿಸ್‌ನಲ್ಲಿ ಅತ್ಯುತ್ತಮ ಮಕ್ಕಳ ಸಂಗೀತ ಆಲ್ಬಂ ಪ್ರಶಸ್ತಿಯನ್ನು ಗೆದ್ದಿದ್ದಕ್ಕಾಗಿ ಫಲ್ಗುಣಿ ಶಾ ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
40 ಆಸುಪಾಸಿನಲ್ಲಿರುವ ಫಲ್ಗುಣಿ ಶಾ ಅವರು ಜೈಪುರ ಸಂಗೀತ ಸಂಪ್ರದಾಯದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಮತ್ತು ಕೌಮುದಿ ಮುನ್ಷಿ ಅವರ ಅಡಿಯಲ್ಲಿ ಬನಾರಸ್ ಶೈಲಿಯ ಠುಮ್ರಿ ಮತ್ತು ಉದಯ್ ಮಜುಂದಾರ್ ಅವರಿಂದ ಅರೆ-ಶಾಸ್ತ್ರೀಯ ಸಂಗೀತದಲ್ಲಿ ತರಬೇತಿ ಪಡೆದಿದ್ದಾರೆ.
ಫಲ್ಗುಣಿ 2000 ರಲ್ಲಿ US ಗೆ ತೆರಳಿದರು. ತಮ್ಮ ವೃತ್ತಿಜೀವನದಲ್ಲಿ ಯೋ-ಯೋ ಮಾ, ವೈಕ್ಲೆಫ್ ಜೀನ್, ಫಿಲಿಪ್ ಗ್ಲಾಸ್, ರಿಕಿ ಮಾರ್ಟಿನ್, ಬ್ಲೂಸ್ ಟ್ರಾವೆಲರ್ ಮತ್ತು ಎ ಆರ್ ರೆಹಮಾನ್, ಅಂತವರ ಜೊತೆ ಕೆಲಸ ಮಾಡಿದ್ದಾರೆ.








