ಸಮಾಧಿ ಮಾಡಿದ 24 ಗಂಟೆಗಳ ನಂತರ ಬದುಕಿ ಬಂದ ವ್ಯಕ್ತಿ…
ತಮಿಳುನಾಡು : ನಾವು ನಿಜ ಜೀವನದಲ್ಲಿ ಊಹಿಸಲೂ ಸಾಧ್ಯವಿಲ್ಲದ ಆತಂಕಕಾರಿ ಘಟನೆಗಳು ನಮ್ಮ ಕಣ್ಣೆದುರೇ ಸಂಭವಿಸಿಬಿಡುತ್ತವೆ. ಇದೇ ರೀತಿಯ ಘಟನೆ ತಮಿಳುನಾಡಿನ ಕುಟುಂಬವೊಂದರಲ್ಲಿ ಸಂಭವವಿಸಿದೆ. ಕುಟುಂಬ ಸದಸ್ಯರೊಬ್ಬರನ್ನ ಸತ್ತಿದ್ದಾನೆ ಎಂದು ಸಂಸ್ಕಾರ ಮಾಡಿ ಬಂದ 24 ಗಂಟೆಗಳ ನಂತರ ವ್ಯಕ್ತಿ ಮರಳಿ ಬಂದಿದ್ದಾನೆ.
ವರದಿಗಳ ಪ್ರಕಾರ, 55 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆಂದು ಭಾವಿಸಿ ಭಾನುವಾರ ಸಂಜೆ ಅವರ ಕುಟುಂಬಸ್ಥರು ಅಂತಿಮ ಸಂಸ್ಕಾರ ಮಾಡಿದ್ದಾರೆ. ಅದೇ ವ್ಯಕ್ತಿ ಸೋಮವಾರ ಸಂಜೆ ಜೀವಂತವಾಗಿ ಮನೆಗೆ ಮರಳಿದ್ದಾರೆ. ತಮಿಳುನಾಡಿನ ಈರೋಡ್ ಬಳಿಯ ಬನಗಲಾದಪುರದಲ್ಲಿ ಈ ಘಟನೆ ನಡೆದಿದೆ.
ದಿನಗೂಲಿ ಕೆಲಸಗಾರರಾಗಿರುವ ಮೂರ್ತಿ ಅವರು ಕಬ್ಬು ಕಟಾವು ಮಾಡಲು ಕೆಲವು ದಿನಗಳ ಹಿಂದೆ ತಿರುಪ್ಪೂರ್‌ಗೆ ಹೋಗಿದ್ದರು. ಭಾನುವಾರ ಬೆಳಿಗ್ಗೆ ಅವರ ಮಗ ಕಾರ್ತಿಗೆ ಸಂಬಂಧಿಕರಿಂದ ಕರೆ ಬಂದಿದೆ. ಅವರ ತಂದೆ ಹತ್ತಿರದ ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮಗ ಸ್ಥಳಕ್ಕಾಗಮಿಸಿ ಅದು ತನ್ನ ತಂದೆಯ ಶವ ಎಂದು ಖಚಿತಪಡಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸತ್ಯಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದು, ಭಾನುವಾರ ರಾತ್ರಿ ಅಂತ್ಯಕ್ರಿಯೆ ನಡೆಸಿ ಶವವನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ. ಆದರೆ, ಸೋಮವಾರ ಸಂಜೆ ಮೂರ್ತಿ ಮನೆಗೆ ಮರಳಿದಾಗ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ.
ತಂದೆ ಮನೆಗೆ ಪ್ರವೇಶಿಸಿದಾಗ ನಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ನನ್ನ ತಂದೆಯ ಸಾವಿನ ಸುದ್ದಿ ಕೇಳಿ ನನಗೆ ಆಘಾತವಾಯಿತು ಮತ್ತು ಅವರು ಮನೆಗೆ ಬಂದಾಗ ನಾನು ಅಷ್ಟೇ ಆಘಾತಕ್ಕೊಳಗಾಗಿದ್ದೆ ಪುತ್ರ ಕಾರ್ತಿ ಮಾಧ್ಯಮಗಳಿಗೆ ಹೇಳಿದ್ದಾರೆ.
ಕಾರ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತರ ನಿಜವಾದ ಗುರುತನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ತನಿಖೆಯನ್ನು ಪುನರಾರಂಭಿಸಿದ್ದಾರೆ.








