ಬೆಂಗಳೂರು : ರಾಜ್ಯದಲ್ಲಿ ಕೊರೊನಾಸುರ ಮತ್ತೆ ಶತಕ ಸಿಡಿಸಿದ್ದು, ನಿನ್ನೆ ಸಂಜೆ 5ರಿಂದ ಇಂದು ಮಧ್ಯಾಹ್ನ 12 ಗಂಟೆಯ ವರೆಗೆ ರಾಜ್ಯದಲ್ಲಿ 100 ಕೊರೊನಾ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,282ಕ್ಕೆ ಏರಿಕೆಯಾಗಿದೆ.
ಆತಂಕದ ವಿಷಯ ಏನಂದ್ರೆ ರಾಜ್ಯದಲ್ಲಿ ಇಲ್ಲಿಯವರೆಗೆ ಮಹಾರಾಷ್ಟ್ರ, ಗುಜರಾತಿನಿಂದ ಮರಳಿದ ವ್ಯಕ್ತಿಗಳಿಗೆ ಕೊರೊನಾ ಬಂದಿತ್ತು. ಆದರೆ ಈಗ ತಮಿಳುನಾಡು ಮತ್ತು ಜಾರ್ಖಂಡ್ ರಾಜ್ಯದಿಂದ ಮರಳಿದ ವ್ಯಕ್ತಿಗಳಿಗೆ ಸೋಂಕು ತಗುಲಿದೆ. ಇಂದು ಪತ್ತೆಯಾದ 100 ಕೊರೊನಾ ಪ್ರಕರಣಗಳ ಪೈಕಿ ಮಹಾರಾಷ್ಟ್ರ 42, ತಮಿಳುನಾಡು 20, ಜಾರ್ಖಂರ್ಡ್ ನಿಂದ ಬಂದ 13 ಮಂದಿಗೆ ಸೋಂಕು ದೃಢಪಟ್ಟಿದೆ.
ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಬುಲೆಟಿನ್ ಪ್ರಕಾರ, ಕೋಲಾರದಲ್ಲಿ 2, ಯಾದಗಿರಿ 14, ದಕ್ಷಿಣ ಕನ್ನಡದಲ್ಲಿ 3, ಬಾಗಲಕೋಟೆಯಲ್ಲಿ 1, ವಿಜಯಪುರದಲ್ಲಿ 5, ದಾವಣಗೆರೆಯಲ್ಲಿ 11, ಬೀದರ್ ನಲ್ಲಿ 10, ಹಾಸನ 13, ಉಡುಪಿ 3, ಚಿಕ್ಕಬಳ್ಳಾಪುರದಲ್ಲಿ 1, ಚಿತ್ರದುರ್ಗದಲ್ಲಿ 19, ಕೊಪ್ಫಳದಲ್ಲಿ1, ಬಳ್ಳಾರಿಯಲ್ಲಿ 1, ಬೆಂಗಳೂರು ನಗರ 2, ಬೆಳಗಾವಿ 11 ಪ್ರಕರಣಗಳು ವರದಿಯಾಗಿವೆ.
ಇನ್ನು 2,282 ಸೋಂಕಿತರ ಪೈಕಿ ಇಂದು 17 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 722 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದ 1514 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ 44 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.








