ಫೇಲ್ ಆಗುತ್ತೇನೆ ಎಂಬ ಭಯದಲ್ಲಿ ತಂದೆಯನ್ನೇ ಕೊಂದ ಬಾಲಕ
ತಾನು ಪರೀಕ್ಷೆಗೆ ಚೆನ್ನಾಗಿ ಓದಿಲ್ಲ, 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗುತ್ತೇನೆ. ಇದರಿಂದ ಅಪ್ಪ ಥಳಿಸುತ್ತಾರೆ ಎಂಬ ಭಯದಲ್ಲಿ 15 ವರ್ಷದ ಬಾಲಕ ತಂದೆಯನ್ನೇ ಕೊಂದಿರುವ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ.
ಮೃತ ತಂದೆಯನ್ನ ದುಲಿಚಂದ್ ಅಹಿರ್ವಾರ್ ಎಂದು ಗುರುತಿಸಲಾಗಿದ್ದು, ಏಪ್ರಿಲ್ 3 ರಂದು ಕೋಣೆಯಲ್ಲಿ ಮಲಗಿದ್ದಾಗ ತಂದೆ ದುಲಿಚಂದ್ ಅಹಿರ್ವಾರ್ ಅವರನ್ನು ಬಾಲಕ ಕೊಡಲಿಯಿಂದ ಕೊಚ್ಚಿ ಹತ್ಯೆಗೈದಿದ್ದಾನೆ. ನಂತರ ಮನೆಯಿಂದ ಬಾಲಕ ಪರಾರಿಯಾಗುತ್ತಿರುವುದನ್ನು ನೆರೆಮನೆಯ ವೀರೇಂದ್ರ ಅಹಿರ್ವಾರ್ ಮತ್ತು ಇನ್ನೋರ್ವ ವ್ಯಕ್ತಿ ಗಮನಿಸಿದ್ದಾರೆ.
ಬಳಿಕ ಘಟನೆ ಕುರಿತಂತೆ ಪೊಲೀಸರು ನೆರೆಮನೆಯವರನ್ನ ವಿಚಾರಿಸಿದಾಗ ವೀರೇಂದ್ರ ಅವರು ಬಾಲಕನ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಬಾಲಕನನ್ನು ಬಂಧಿಸಿ ವಿಚಾರಣೆ ನಡೆಸಿದ ಬಳಿಕ ತಿಳಿದು ಬಂದಿದ್ದು, ಈ ವೇಳೆ 10ನೇ ತರಗತಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮನೆಯಿಂದ ಹೊರಗೆ ಹಾಕುವುದಾಗಿ ತನ್ನ ತಂದೆ ಬೆದರಿಕೆ ಹಾಕಿದ್ದರು, ಅಲ್ಲದೇ ಓದಿಲ್ಲ ಅಂದರೆ ಗದರಿಸುತ್ತಿದ್ದರು ಎಂದು ಬಾಲಕ ಹೇಳಿದ್ದಾನೆ.
ಈ ಬಾರಿ ಪರೀಕ್ಷೆ ವೇಳೆ ಓದಿರಲಿಲ್ಲ ಮತ್ತು ಪರೀಕ್ಷೆಗಾಗಿ ಸರಿಯಾಗಿ ತಯಾರಿ ನಡೆಸಿರಲಿಲ್ಲ. ಹೀಗಾಗಿ ಫೇಲ್ ಆಗುತ್ತೇನೆ ಎಂಬ ಭಯವಿದ್ದರಿಂದ ತಂದೆಯನ್ನು ಕೊಲ್ಲಲು ನಿರ್ಧರಿಸಿದ್ದಾಗಿ ಸತ್ಯ ಒಪ್ಪಿಕೊಂಡಿದ್ದಾನೆ. ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಲ್ಲಿಂದ ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ.








