ಹೈದರಾಬಾದ್: ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಸದ್ಯ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಬಾಕ್ಸ್ ಆಫೀಸ್ ನಲ್ಲಿ ಮಾತ್ರ ನಾನಿ ಹವಾ ಜೋರಾಗಿದೆ. ಇದೇ ನಡುವೆ ಸಿನಿಮಾ ಪ್ರಚಾರದ ಭಾಗವಾಗಿ ನಾನಿ ಆಡಿದ ಒಂದು ಮಾತು ಈಗ ಇಂಟರ್ನೆಟ್ ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಸರಳತೆಯಿಂದಲೇ ಅಭಿಮಾನಿಗಳ ಮನಗೆಲ್ಲುವ ನಾನಿ, ಈ ಬಾರಿ ರಾಪಿಡೋ ಚಾಲಕರ ವೇದಿಕೆಯಲ್ಲಿ ಆಡಿದ ಮಾತು ನೆಟ್ಟಿಗರ ಲಾಜಿಕ್ ಕೆಣಕಿದೆ.
ಹೀರೋ ಆಗದಿದ್ರೆ ಬೈಕ್ ಟ್ಯಾಕ್ಸಿ ಡ್ರೈವರ್ ಆಗ್ತಿದ್ದೆ
ಹೈದರಾಬಾದ್ ನ ಅನ್ನಪೂರ್ಣ ಸ್ಟುಡಿಯೋದಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕರಿಗಾಗಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ನಾನಿ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ಚಾಲಕರನ್ನು ಉದ್ದೇಶಿಸಿ ಮಾತನಾಡಿದ ಅವರು, ತಮಗೆ ಬೈಕ್ ಓಡಿಸುವುದು ಎಂದರೆ ಅಚ್ಚುಮೆಚ್ಚು. ನನಗೆ ಟೂ ವೀಲರ್ ಓಡಿಸುವುದು ತುಂಬಾ ಇಷ್ಟ. ಹೊಸ ಜನರನ್ನು ಭೇಟಿಯಾಗುವುದು, ಅವರೊಂದಿಗೆ ಪ್ರಯಾಣಿಸುವಾಗ ಅವರ ಜೀವನದ ಕಥೆಗಳನ್ನು ಕೇಳುವುದು ನನಗೆ ಖುಷಿ ನೀಡುತ್ತದೆ. ಒಂದು ವೇಳೆ ನಾನು ಚಿತ್ರರಂಗಕ್ಕೆ ಬಂದು ಹೀರೋ ಆಗದೇ ಇದ್ದಿದ್ದರೆ, ಖಂಡಿತವಾಗಿಯೂ ನಿಮ್ಮಂತೆಯೇ ರಾಪಿಡೋ ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ನೆಲೆಸುತ್ತಿದ್ದೆ ಎಂದು ಮನಬಿಚ್ಚಿ ಮಾತನಾಡಿದ್ದಾರೆ.
ನಾನಿ ಮಾತಿಗೆ ನೆಟ್ಟಿಗರ ಟೈಮ್ ಮಷೀನ್ ಕೌಂಟರ್
ನಾನಿ ಅವರ ಈ ಭಾವನಾತ್ಮಕ ಹೇಳಿಕೆಗೆ ನೆಟ್ಟಿಗರು ಮಾತ್ರ ತಮ್ಮದೇ ಶೈಲಿಯಲ್ಲಿ ಲಾಜಿಕ್ ಹುಡುಕಿ ಕಾಲೆಳೆಯುತ್ತಿದ್ದಾರೆ. ನಾನಿ ಅಣ್ಣಾ, ನೀವು ಚಿತ್ರರಂಗಕ್ಕೆ ಬಂದ ಕಾಲದಲ್ಲಿ ರಾಪಿಡೋ ಅನ್ನೋ ಕಂಪನಿಯೇ ಹುಟ್ಟಿರಲಿಲ್ಲ, ಇನ್ನು ಡ್ರೈವರ್ ಹೇಗೆ ಆಗ್ತಿದ್ರಿ ಎಂದು ಪ್ರಶ್ನಿಸುತ್ತಿದ್ದಾರೆ. ನಾನಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು 2008ರಲ್ಲಿ ಅಷ್ಟಾ ಚಮ್ಮಾ ಸಿನಿಮಾ ಮೂಲಕ. ಆದರೆ ರಾಪಿಡೋ ಕಂಪನಿ ಆರಂಭವಾಗಿದ್ದೇ 2015ರಲ್ಲಿ. ಈ ಟೈಮ್ ಲೈನ್ ಇಟ್ಟುಕೊಂಡು ಅಭಿಮಾನಿಗಳು ನಾನಿ ಅವರ ಕಾಲೆಳೆಯುತ್ತಿದ್ದಾರೆ. ಹೇಳೋದಕ್ಕೆ ಒಂದು ಲಾಜಿಕ್ ಬೇಡವೇ ಎಂದು ಸೋಷಿಯಲ್ ಮೀಡಿಯಾದಲ್ಲಿ ತಮಾಷೆಯ ಮೀಮ್ ಗಳು ಹರಿದಾಡುತ್ತಿವೆ.
ಪ್ರಚಾರಕ್ಕಾಗಿ ಹೀಗೆಲ್ಲಾ ಹೇಳ್ತೀರಾ ಎಂದು ಪ್ರಶ್ನೆ
ನಾನಿ ಅವರ ಹಿನ್ನೆಲೆ ತಿಳಿದವರಿಗೆ ಅವರು ಮೊದಲಿನಿಂದಲೂ ಹೀರೋ ಆಗಬೇಕು ಎಂದು ಬಂದವರಲ್ಲ ಎಂಬುದು ಗೊತ್ತು. ಅವರು ಮೊದಲು ಸಹಾಯಕ ನಿರ್ದೇಶಕರಾಗಿ ಅಸಿಸ್ಟೆಂಟ್ ಡೈರೆಕ್ಟರ್ ಕೆಲಸಕ್ಕೆ ಸೇರಿದ್ದರು. ನಂತರ ರೇಡಿಯೋ ಜಾಕಿಯಾಗಿ ಅಂದರೆ ಆರ್ಜೆ ಆಗಿ ಕೆಲಸ ಮಾಡಿ ಆಕಸ್ಮಿಕವಾಗಿ ನಾಯಕನಾದವರು. ಹೀಗಿರುವಾಗ ರಾಪಿಡೋ ಡ್ರೈವರ್ ಆಗುವ ಮಾತು ಕೇವಲ ಪ್ರಚಾರಕ್ಕಾಗಿ ಅಥವಾ ಚಾಲಕರನ್ನು ಖುಷಿಪಡಿಸಲು ಹೇಳಿದ ಸುಳ್ಳು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.
ಮಿಶ್ರ ಪ್ರತಿಕ್ರಿಯೆ ನಡುವೆಯೂ ಬಾಕ್ಸ್ ಆಫೀಸ್ ಸುನಾಮಿ
ಇನ್ನು ನಾನಿ ಅಭಿನಯದ ದಿ ಪ್ಯಾರಡೈಸ್ ಸಿನಿಮಾ ಬಿಡುಗಡೆಯಾದ ಮೊದಲ ದಿನದಿಂದಲೇ ಭಾರಿ ಟೀಕೆಗಳನ್ನು ಎದುರಿಸುತ್ತಿದೆ. ಸಿನಿಮಾದಲ್ಲಿ ದೃಶ್ಯಗಳು ಸರಿಯಿಲ್ಲ, ಕಥೆಯಲ್ಲಿ ದಮ್ಮಿಲ್ಲ ಎಂಬ ನೆಗೆಟಿವ್ ಕಾಮೆಂಟ್ ಗಳು ಕೇಳಿಬರುತ್ತಿವೆ. ಆದರೆ ಆಶ್ಚರ್ಯವೆಂದರೆ ಈ ನೆಗೆಟಿವ್ ಟಾಕ್ ನಡುವೆಯೂ ಸಿನಿಮಾ ಕಲೆಕ್ಷನ್ ನಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಚಿತ್ರತಂಡದ ಅಧಿಕೃತ ಮಾಹಿತಿಯ ಪ್ರಕಾರ, ಸಿನಿಮಾ ಕೇವಲ ಎರಡು ದಿನಗಳಲ್ಲಿ ವಿಶ್ವಾದ್ಯಂತ 114 ಕೋಟಿ ರೂಪಾಯಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ದಿನವೇ 88 ಕೋಟಿ ಗಳಿಸುವ ಮೂಲಕ ನಾನಿ ತಮ್ಮ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆದುಕೊಂಡಿದ್ದಾರೆ.








