ಬೆಂಗಳೂರು, ಮೇ 26 : ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ತನ್ನ ಉದ್ಯೋಗಿಗಳಿಗೆ ಶೇಕಡಾ 20ರ ತನಕ ತಾತ್ಕಾಲಿಕವಾಗಿ ವೇತನ ಕಡಿತ ಮಾಡಲು ನಿರ್ಧರಿಸಿದೆ. ಟಿವಿಎಸ್ ಮೋಟಾರ್ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಭಾರೀ ಇಳಿಕೆ ಆಗಿರುವುದರಿಂದ ಕಂಪನಿ ಈ ನಿರ್ಧಾರಕ್ಕೆ ಬಂದಿದ್ದು, ವೇತನ ಕಡಿತವು ಆರು ತಿಂಗಳ ಅವಧಿಗೆ ಮಾತ್ರ ಎಂದು ತಿಳಿಸಿದೆ.
ಲಾಕ್ ಡೌನ್ ಹಿನ್ನೆಲೆಯಲ್ಲಿ ಟಿವಿಎಸ್ ಮೋಟಾರ್ ಕಂಪೆನಿಯು ಆರ್ಥಿಕ ಬಿಕ್ಕಟ್ಟನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ 2020ರ ಮೇ ತಿಂಗಳಿಂದ ಅಕ್ಟೋಬರ್ ತನಕ ತಾತ್ಕಾಲಿಕವಾಗಿ ವೇತನ ಕಡಿತ ಮಾಡಲು ನಿರ್ಧರಿಸಲಾಗಿದೆ. ವಿವಿಧ ಹಂತಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗಿಗಳ ವೇತನವನ್ನು ಆರು ತಿಂಗಳ ತನಕ ತಾತ್ಕಾಲಿಕವಾಗಿ ಕಡಿತ ಮಾಡಲಿದ್ದು, ಜೂನಿಯರ್ ಎಕ್ಸ್ ಕ್ಯೂಟಿವ್ ಹಂತದವರಿಗೆ ಶೇಕಡಾ 5 , ಸೀನಿಯರ್ ಮ್ಯಾನೇಜ್ ಮೆಂಟ್ ಹಂತದವರಿಗೆ ಶೇಕಡಾ 15 ರಿಂದ 20 ವೇತನ ಕಡಿತ ಮಾಡಲಾಗುವುದು ಎಂಬ ಮಾಹಿತಿಯನ್ನು ಕಂಪನಿ ನೀಡಿದೆ.
ಮೋಟಾರ್ ಕಂಪೆನಿಯ ದ್ವಿಚಕ್ರ ವಾಹನಗಳ ಮಾರಾಟವು ಕಳೆದ ವರ್ಷಕ್ಕೆ ಹೋಲಿಸಿದರೆ, ಮಾರ್ಚ್ ತಿಂಗಳಿನಲ್ಲಿ ಶೇಕಡಾ 55 ಇಳಿಕೆ ಕಂಡಿದ್ದು, ಏಪ್ರಿಲ್ ತಿಂಗಳು
ಲಾಕ್ ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನ ಮಾರಾಟವಾಗಿಲ್ಲ. ಟಿವಿಎಸ್ ಮೋಟಾರ್ ಕಂಪನಿಯು ವರ್ಕ್ ಮನ್ , ಡ್ರೈವರ್, ಮೆಕ್ಯಾನಿಕ್ ಸೇರಿದಂತೆ ಎಂಟ್ರಿ ಲೆವಲ್ ಉದ್ಯೋಗಿಗಳ ವೇತನ ಕಡಿತಗೊಳಿಸದಿರಲು ನಿರ್ಧರಿಸಿದೆ.








