ಉಡುಪಿ: ಕರಾವಳಿಯ ರಾಜಕೀಯ ಮಸಲತ್ತುಗಳು ಈಗ ಹೊಸ ತಿರುವು ಪಡೆದುಕೊಂಡಿವೆ. ಬಿಜೆಪಿಯ ಕಟ್ಟಾಳು, ಉಡುಪಿಯ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು ಬಿಜೆಪಿಯ ಹಿರಿಯ ನಾಯಕರ ವಿರುದ್ಧ ಕೆಂಡಾಮಂಡಲರಾಗಿದ್ದು, ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಅಖಾಡ ಸಿದ್ಧಪಡಿಸುತ್ತಿರುವುದಾಗಿ ಘೋಷಿಸಿದ್ದಾರೆ. ಕಾಂಗ್ರೆಸ್ ಸೇರ್ಪಡೆಯ ಊಹಾಪೋಹಗಳ ನಡುವೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಭಟ್, ಬಿಜೆಪಿ ನಾಯಕರ ಕಡೆಗಣನೆ ಮತ್ತು ಹಾಲಿ ಶಾಸಕ ಯಶಪಾಲ್ ಸುವರ್ಣ ಅವರ ವರ್ತನೆಯ ವಿರುದ್ಧ ಬೆಂಕಿ ಉಗುಳಿದ್ದಾರೆ. ಈ ಬ್ರಾಹ್ಮಣ ಯಾವುದಕ್ಕೂ ಪ್ರಯೋಜನವಿಲ್ಲ ಎಂಬ ಮನಸ್ಥಿತಿಯಲ್ಲಿ ಬಿಜೆಪಿ ನಾಯಕರಿದ್ದಾರೆ ಎಂದು ಹೇಳುವ ಮೂಲಕ ಜಾತೀಯತೆಯ ಅಸ್ತ್ರವನ್ನು ಬಿಜೆಪಿ ವಿರುದ್ಧವೇ ತಿರುಗಿಸಿದ್ದಾರೆ.
ಪಕ್ಷ ಕಟ್ಟಿದವನಿಗೆ ಸಿಕ್ಕ ಉಡುಗೊರೆ ಛೀ ಥೂ
ಉಡುಪಿ ಶಾಸಕ ಯಶಪಾಲ್ ಸುವರ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರಘುಪತಿ ಭಟ್, ರಾಜಕೀಯವಾಗಿ ಯಶಪಾಲ್ ಅವರನ್ನು ಬೆಳೆಸಿದ್ದು ಇದೇ ರಘುಪತಿ ಭಟ್ ಎಂಬ ಸತ್ಯವನ್ನು ನೆನಪಿಸಿದರು. 2004ರಲ್ಲಿ ನನ್ನ ವಿರುದ್ಧವೇ ಕೆಲಸ ಮಾಡಿದ್ದ ಯಶಪಾಲ್ ಅವರನ್ನು ಗೆದ್ದ ನಂತರ ಸೌಜನ್ಯದಿಂದ ಪಕ್ಷಕ್ಕೆ ಕರೆದುಕೊಂಡು ಕೌನ್ಸಿಲರ್ ಮಾಡಿದ್ದೆ. ಆದರೆ ಇಂದು ಅವರು ನನಗೆ ಛೀ ಥೂ ಎನ್ನುತ್ತಿದ್ದಾರೆ. ಕಾಪುವಿನಲ್ಲಿ ಸುರೇಶ್ ಶೆಟ್ಟಿ ಗುರ್ಮೆ ಅವರು ಲಾಲಾಜಿ ಮೆಂಡನ್ ಅವರಿಗೆ ಗೌರವ ನೀಡುತ್ತಿದ್ದಾರೆ, ಆದರೆ ಉಡುಪಿಯಲ್ಲಿ ಬಿಜೆಪಿ ಶಾಸಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಸಣ್ಣ ಲೇಔಟ್ ವಿಚಾರಕ್ಕೂ ನಾನು ಧರಣಿ ಕುಳಿತುಕೊಳ್ಳಬೇಕಾದ ಸ್ಥಿತಿ ಬಂದಿದೆ ಎಂದು ಅಸಹಾಯಕತೆ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಗಕ್ಕೆ ಸಿಕ್ಕಿದ್ದು ಬರಿ ಮೋಸದ ಕಣ್ಣೀರು
2013ರಲ್ಲಿ ಕೇವಲ ಒಂದು ಸಿಡಿ ಬಂದಿದೆ ಎಂಬ ಕಾರಣಕ್ಕೆ ಪಕ್ಷದ ಹಿತದೃಷ್ಟಿಯಿಂದ ಅನಂತಕುಮಾರ್ ಅವರ ಮಾತಿಗೆ ಬೆಲೆ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ಆ ಸಿಡಿ ಸುಳ್ಳಾಗಿತ್ತು, ಆ ಹುಡುಗಿ ಯಾರೆಂದೇ ಗೊತ್ತಿರಲಿಲ್ಲ. ಆದರೂ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೆ. ಆದರೆ 2023ರಲ್ಲಿ ಹಾಗಾಗಲಿಲ್ಲ. ಕೊನೆಯ ಕ್ಷಣದವರೆಗೂ ನೀನೇ ಅಭ್ಯರ್ಥಿ ಎಂದು ಹೇಳಿ, ಟಿವಿಯಲ್ಲಿ ಅಭ್ಯರ್ಥಿ ಘೋಷಣೆಯಾದಾಗ ನನಗೆ ವಿಷಯ ತಿಳಿಯಿತು. ಎಷ್ಟು ಬಾರಿ ಮೋಸ ತಡೆದುಕೊಳ್ಳಲು ಸಾಧ್ಯ? ನಾನು ನಾಯಕರ ಕೈ ಕಾಲು ಹಿಡಿಯಲು ಸಿದ್ಧನಿಲ್ಲ ಎಂದು ಭಟ್ ಗುಡುಗಿದರು. ಪ್ರತಾಪ್ ಸಿಂಹ ಮತ್ತು ಅನಂತಕುಮಾರ್ ಹೆಗಡೆಯಂತಹ ನಾಯಕರಿಗೂ ಅನ್ಯಾಯವಾಗಿದೆ ಎಂದು ಅವರು ಇದೇ ವೇಳೆ ಧ್ವನಿ ಎತ್ತಿದರು.
ಬಿಜೆಪಿಯಲ್ಲಿದ್ದರೆ ಮಾತ್ರ ಕೇಸರಿ ಶಾಲು
ನನ್ನ ಶವದ ಮೇಲೆ ಬಿಜೆಪಿ ಧ್ವಜ ಬೇಕು ಎಂದು ನಾನು ಹೇಳಿದ್ದು ನಿಜ. ಆದರೆ ಆ ಮಾತು ಹೇಳಿದಾಗ ನಾನು ಬಿಜೆಪಿಯಲ್ಲಿದ್ದೆ ಮತ್ತು ಪಕ್ಷನಿಷ್ಠನಾಗಿದ್ದೆ. ಈಗ ನಾನು ಬಿಜೆಪಿಯಲ್ಲೇ ಇಲ್ಲವಲ್ಲ? ಬಿಜೆಪಿ ನಾಯಕರು ನನ್ನನ್ನು ಮಾತನಾಡಿಸುವ ಸೌಜನ್ಯವನ್ನೂ ತೋರುತ್ತಿಲ್ಲ. ಒಂದು ವೇಳೆ ಗೌರವದಿಂದ ವಾಪಸ್ ಕರೆದರೆ ಯೋಚಿಸುತ್ತೇನೆ, ಇಲ್ಲದಿದ್ದರೆ 2028ರ ಚುನಾವಣೆಯಲ್ಲಿ ಪಕ್ಷೇತರನಾಗಿಯಾದರೂ ಸ್ಪರ್ಧಿಸುವುದು ಖಚಿತ. ಕಾರ್ಯಕರ್ತರ ಮತ್ತು ಅಭಿಮಾನಿಗಳ ದೊಡ್ಡ ಸೈನ್ಯ ನನ್ನ ಜೊತೆಗಿದೆ. ವಿಜಯದಶಮಿಯ ನಂತರ ನನ್ನ ರಾಜಕೀಯ ಪರ್ವದ ಆರಂಭವಾಗಲಿದೆ ಎಂದು ಸಾರುವ ಮೂಲಕ ರಘುಪತಿ ಭಟ್ ಬಿಜೆಪಿಗೆ ಅಂತಿಮ ಎಚ್ಚರಿಕೆ ನೀಡಿದ್ದಾರೆ.








