ನವದೆಹಲಿ: ಭಾರತೀಯ ರಾಜಕಾರಣದ ಅತ್ಯಂತ ಪ್ರಭಾವಿ ಮಹಿಳೆ, ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಬದುಕು ಒಂದು ತೆರೆದ ಪುಸ್ತಕದಂತಿದ್ದರೂ, ಅದರಲ್ಲಿ ಅಡಗಿರುವ ನೋವು, ತ್ಯಾಗ ಮತ್ತು ಹೋರಾಟದ ನೈಜ ಚಿತ್ರಣ ಈಗ ಜಗತ್ತಿನ ಮುಂದೆ ಬರಲು ಸಿದ್ಧವಾಗಿದೆ. ಸೋನಿಯಾ ಗಾಂಧಿ ಅವರು ಬರೆದಿರುವ ಬಿಲಾಂಗಿಂಗ್ ಎ ಜರ್ನಿ ಆಫ್ ಲವ್ ಎಂಬ ಆತ್ಮಚರಿತ್ರೆಯ ಫಸ್ಟ್ ಲುಕ್ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದೆ. ಇನ್ಸ್ಟಾಗ್ರಾಮ್ ಪ್ರವೇಶಿಸಿದ ಸೋನಿಯಾ ಗಾಂಧಿ ಅವರು ತಮ್ಮ ಮೊದಲ ಪೋಸ್ಟ್ನಲ್ಲಿಯೇ ಈ ಆತ್ಮಚರಿತ್ರೆಯ ಬಗ್ಗೆ ಮಾಹಿತಿ ನೀಡಿರುವುದು ಲಕ್ಷಾಂತರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಕೇಂಬ್ರಿಡ್ಜ್ ನ ಪ್ರೇಮ ಮತ್ತು ಭಾರತದ ಸಂಸ್ಕೃತಿ
ಈ ಪುಸ್ತಕವು ಸೋನಿಯಾ ಗಾಂಧಿ ಅವರ ಇಟಲಿಯ ವೆನೆಟೊ ಪ್ರದೇಶದಲ್ಲಿ ಕಳೆದ ಸುಂದರ ಬಾಲ್ಯದ ದಿನಗಳಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಲಂಡನ್ ನ ಕೇಂಬ್ರಿಡ್ಜ್ ನಲ್ಲಿ ರಾಜೀವ್ ಗಾಂಧಿಯವರನ್ನು ಮೊದಲ ಬಾರಿ ಭೇಟಿಯಾದ ಕ್ಷಣ, ಇಬ್ಬರ ನಡುವೆ ಚಿಗುರಿದ ಪ್ರೇಮ ಮತ್ತು ಭಾರತದ ನೆಹರೂ ಗಾಂಧಿ ಕುಟುಂಬದ ಸೊಸೆಯಾಗಿ ಬಂದ ನಂತರ ಅವರ ಜೀವನದಲ್ಲಿ ಆದ ಆಘಾತಕಾರಿ ಪರಿವರ್ತನೆಗಳನ್ನು ಪುಸ್ತಕದಲ್ಲಿ ಅತ್ಯಂತ ಭಾವುಕವಾಗಿ ವಿವರಿಸಲಾಗಿದೆ. ವಿದೇಶಿ ನೆಲದಿಂದ ಬಂದ ಸೋನಿಯಾ ಅವರು ಭಾರತಕ್ಕೆ ಬಂದ ಹೊಸತರಲ್ಲಿ ಹಿಂದಿ ಕಲಿಯಲು ಪಟ್ಟ ಶ್ರಮ, ಸೀರೆ ಉಡುವ ಕಲೆ ಮತ್ತು ಭಾರತೀಯ ಆಹಾರ ಪದ್ಧತಿಗೆ ಒಗ್ಗಿಕೊಂಡ ರೀತಿಯನ್ನು ಪುಸ್ತಕದಲ್ಲಿ ಮೆಲುಕು ಹಾಕಲಾಗಿದೆ.
ಸರಣಿ ದುರಂತಗಳು
ಗಾಂಧಿ ಕುಟುಂಬವನ್ನು ಕಾಡಿದ ಸಾವು ಮತ್ತು ದುರಂತಗಳ ಕರಾಳ ನೆನಪುಗಳನ್ನು ಸೋನಿಯಾ ಈ ಆತ್ಮಚರಿತ್ರೆಯಲ್ಲಿ ಬಿಚ್ಚಿಟ್ಟಿದ್ದಾರೆ. ವಿಮಾನ ಅಪಘಾತದಲ್ಲಿ ಸಂಜಯ್ ಗಾಂಧಿ ಸಾವು, ಇಂದಿರಾ ಗಾಂಧಿಯವರ ಭೀಕರ ಹತ್ಯೆ ಮತ್ತು ಅದಾದ ಕೆಲವೇ ವರ್ಷಗಳಲ್ಲಿ ಪತಿ ರಾಜೀವ್ ಗಾಂಧಿ ಅವರ ಬಲಿಪಶುವಾದ ಘಟನೆಗಳು ಸೋನಿಯಾ ಅವರನ್ನು ಜರ್ಜರಿತಗೊಳಿಸಿದ್ದವು. 1991ರಲ್ಲಿ ರಾಜೀವ್ ಹತ್ಯೆಯ ನಂತರ ರಾಜಕೀಯದಿಂದ ಸಂಪೂರ್ಣ ದೂರವಿರಲು ನಿರ್ಧರಿಸಿದ್ದ ಸೋನಿಯಾ ಅವರು, 1997ರಲ್ಲಿ ಕಾಂಗ್ರೆಸ್ ಪಕ್ಷವು ಬಣಗಳಾಗಿ ಒಡೆದು ದುರ್ಬಲಗೊಳ್ಳುತ್ತಿದ್ದಾಗ ಅನಿವಾರ್ಯವಾಗಿ ಪಕ್ಷವನ್ನು ಉಳಿಸಲು ಸದಸ್ಯತ್ವ ಪಡೆದರು. ಕೇವಲ 62 ದಿನಗಳಲ್ಲಿ ಅಧ್ಯಕ್ಷ ಪಟ್ಟ ಅಲಂಕರಿಸಿದ ಅವರು, ಪಕ್ಷದ ಇತಿಹಾಸದಲ್ಲೇ ಅತಿ ದೀರ್ಘಕಾಲ ಅಧ್ಯಕ್ಷರಾಗಿ ಮುನ್ನಡೆಸಿದ ದಾಖಲೆ ಬರೆದರು.
2004ರ ಐತಿಹಾಸಿಕ ಅಧಿಕಾರ ತ್ಯಾಗದ ರಹಸ್ಯ
ಪುಸ್ತಕದ ಅತ್ಯಂತ ಪ್ರಮುಖ ಭಾಗವೆಂದರೆ 2004ರ ಲೋಕಸಭಾ ಚುನಾವಣೆಯ ನಂತರದ ಬೆಳವಣಿಗೆಗಳು. ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಭರ್ಜರಿ ಬಹುಮತ ಗಳಿಸಿದ್ದರೂ ಮತ್ತು ಮಿತ್ರಪಕ್ಷಗಳು ಸೋನಿಯಾ ಅವರನ್ನೇ ಪ್ರಧಾನಿ ಹುದ್ದೆಗೆ ಒತ್ತಾಯಿಸಿದ್ದರೂ, ಅವರು ಆ ಅತ್ಯುನ್ನತ ಪದವಿಯನ್ನು ನಿರಾಕರಿಸಿದರು. ಎನ್ಡಿಎ ನಾಯಕರು ಸೋನಿಯಾ ಅವರ ವಿದೇಶಿ ಮೂಲದ ವಿಷಯವನ್ನೇ ಅಸ್ತ್ರವಾಗಿ ಬಳಸಿಕೊಂಡು ವಿರೋಧ ವ್ಯಕ್ತಪಡಿಸಿದ್ದರಿಂದ, ಸೋನಿಯಾ ಅವರು ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಹುದ್ದೆಗೆ ಪ್ರಸ್ತಾಪಿಸುವ ಮೂಲಕ ಇಡೀ ಜಗತ್ತೇ ಬೆರಗಾಗುವಂತೆ ಮಾಡಿದರು.








