ಚೆನ್ನೈ: ಕಾಕ್ರೋಚ್ ಜನತಾ ಪಾರ್ಟಿಯ ಸಿಜೆಪಿ ಪ್ರತಿಭಟನೆಯ ಮೇಲೆ ಕೇಂದ್ರ ಸರ್ಕಾರ ಕೈಗೊಂಡ ಕ್ರಮವನ್ನು ಟೀಕಿಸಿ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಈಗ ತಮ್ಮ ಹೇಳಿಕೆಯ ಬಗ್ಗೆ ಅತ್ಯಂತ ತಾರ್ಕಿಕ ಮತ್ತು ಸ್ಫೋಟಕ ಸ್ಪಷ್ಟನೆ ನೀಡಿದ್ದಾರೆ. ತಾವು ಎಂದಿಗೂ ಅಭಿಜೀತ್ ದೀಪ್ಕೆ ನೇತೃತ್ವದ ಸಿಜೆಪಿ ಸಿದ್ಧಾಂತವನ್ನು ಬೆಂಬಲಿಸುವುದಿಲ್ಲ ಮತ್ತು ನಮ್ಮಿಬ್ಬರ ರಾಜಕೀಯ ಅಜೆಂಡಾ ಸಂಪೂರ್ಣ ಭಿನ್ನವಾಗಿದೆ ಎಂದು ಹೇಳುವ ಮೂಲಕ, ಅಣ್ಣಾಮಲೈ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಪ್ರತಿಭಟನಾಕಾರರನ್ನು ಹತ್ತಿಕ್ಕುವ ಸರ್ಕಾರದ ಧೋರಣೆಯ ವಿರುದ್ಧ ಅವರು ಎತ್ತಿರುವ ಪ್ರಶ್ನೆಗಳು ಹಾಗೆಯೇ ಉಳಿದಿವೆ.
ಪ್ರತಿಭಟನೆಯ ಹಕ್ಕು
ತಮ್ಮ ವಿ ದಿ ಲೀಡರ್ಸ್ ಚಳವಳಿಯ ವೇದಿಕೆಯಲ್ಲಿ ಮಾತನಾಡಿದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ತನ್ನದೇ ಆದ ಹೋರಾಟದ ಹಕ್ಕಿದೆ ಎಂದು ಪ್ರತಿಪಾದಿಸಿದರು. ಪ್ರತಿಭಟನಾಕಾರರ ವಿರುದ್ಧ ದ್ವೇಷದ ರಾಜಕಾರಣ ಮಾಡುವುದಕ್ಕಿಂತ ಕಾನೂನಾತ್ಮಕವಾಗಿ ಪರಿಸ್ಥಿತಿಯನ್ನು ನಿಭಾಯಿಸುವುದು ಮುಖ್ಯ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಸೌರವ್ ದಾಸ್ ಮತ್ತು ಅಶುತೋಷ್ ರಾಂಕಾ ಅವರನ್ನು ಬಂಧಿಸಿರುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲೆ ನಡೆದ ದಾಳಿ ಎಂದು ಅವರು ಪುನರುಚ್ಚರಿಸಿದ್ದಾರೆ.
ಟ್ವಿಟರ್ ಡ್ರಾಮಾ ಬೇಡ
ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾಮಲೈ ಒಂದು ತೀಕ್ಷ್ಣ ಸಲಹೆಯನ್ನು ನೀಡಿದ್ದಾರೆ. ಸಿಜೆಪಿ ಪ್ರತಿಭಟನಾಕಾರರು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಅಥವಾ ವಿದೇಶಿ ಹಣ ಪಡೆಯುತ್ತಿದ್ದಾರೆ ಎಂಬ ಅನುಮಾನವಿದ್ದರೆ, ಕೂಡಲೇ ಐಬಿ ಅಥವಾ ರಾವ್ ನಂತಹ ಗುಪ್ತಚರ ಸಂಸ್ಥೆಗಳನ್ನು ಬಳಸಿ ತನಿಖೆ ನಡೆಸಿ ಶಿಕ್ಷೆ ವಿಧಿಸಿ. ಅದನ್ನು ಬಿಟ್ಟು ಟ್ವಿಟರ್ ಅಂತಹ ಸಾಮಾಜಿಕ ಜಾಲತಾಣಗಳಲ್ಲಿ ಭ್ರಮೆಗಳನ್ನು ಮತ್ತು ದ್ವೇಷದ ವಾತಾವರಣವನ್ನು ಸೃಷ್ಟಿಸುವುದು ಒಬ್ಬ ಜವಾಬ್ದಾರಿಯುತ ಸರ್ಕಾರದ ಲಕ್ಷಣವಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ. ಇದು ಕೇವಲ ಸಿಜೆಪಿಗೆ ನೀಡಿದ ಬೆಂಬಲವಲ್ಲ, ಬದಲಾಗಿ ವ್ಯವಸ್ಥೆಯ ಸುಧಾರಣೆಗಾಗಿ ನೀಡಿದ ಕರೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.
ಮೋದಿಗೆ ಬೆಂಬಲ ಆದರೆ ತಪ್ಪುಗಳಿಗೆ ಪ್ರಶ್ನೆ
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಮಾಡುತ್ತಿರುವ ಅದ್ಭುತ ಕೆಲಸಗಳನ್ನು ಶ್ಲಾಘಿಸಿದ ಅಣ್ಣಾಮಲೈ, ಮೋದಿ ಅವರಿಗೆ ಯಾರೂ ದೇಶಭಕ್ತಿಯ ಪಾಠ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು. ಆದರೆ ಸರ್ಕಾರ ಒಂದು ತಪ್ಪು ನಿರ್ಧಾರ ಕೈಗೊಂಡಾಗ ಅದನ್ನು ಪ್ರಶ್ನಿಸುವುದು ನಾಗರಿಕನ ಮತ್ತು ನಾಯಕನ ಧರ್ಮವಾಗಿದೆ. ನಾನು ಸದಾ ಸತ್ಯದ ಪರವಾಗಿ ನಿಲ್ಲುತ್ತೇನೆ, ಅದು ನಮ್ಮ ಸರ್ಕಾರದ ವಿರುದ್ಧವಾಗಿದ್ದರೂ ಸರಿಯೇ ಎಂದು ಧೀಮಂತ ನುಡಿಗಳನ್ನಾಡಿದ್ದಾರೆ. ಅತ್ತ ಅಣ್ಣಾಮಲೈ ಅವರ ಈ ಹೇಳಿಕೆಗಳಿಗೆ ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅಣ್ಣಾಮಲೈ ಅವರು ಶಾಂತಿಯುತ ಪ್ರತಿಭಟನೆ ಮತ್ತು ಉದ್ದೇಶಪೂರ್ವಕ ಕಾನೂನು ಉಲ್ಲಂಘನೆಯ ನಡುವಿನ ವ್ಯತ್ಯಾಸವನ್ನು ಮರೆಯುತ್ತಿದ್ದಾರೆ ಎಂದು ಕುಟುಕಿದ್ದಾರೆ.








