ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವು ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ. ಬೆಂಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಜನರಿಗೆ ಸಹಾಯ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಎರಡು ಬಾರಿ ಮನವಿ ಸಲ್ಲಿಸಿದ್ದೇನೆ. ಅಸಂಘಟಿತ ಕಾರ್ಮಿಕರು, ಕುಲ ಕಸಬು ಮಾಡುವ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವಂತೆ ಮನವಿ ಮಾಡಿದ್ದೇನೆ. ಆದರೆ ರಾಜ್ಯ ಸರ್ಕಾರ ಈವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ.
ಈ ಸರ್ಕಾರ ಪಂಚೇಂದ್ರಿಯಗಳನ್ನು ಕಳೆದುಕೊಂಡಿದೆ ಎಂದು ಗುಡುಗಿದರು. ಇನ್ನು ರಾಜ್ಯ ಸರ್ಕಾರ ಸವಿತಾ ಸಮಾಜ, ನೇಕಾರರು, ಮಡಿವಾಳ ಸಮಾಜದ ಕುಟುಂಬಗಳಿಗೆ ತಲಾ 5 ಸಾವಿರ ರೂ. ನೀಡುವುದಾಗಿ ಭರವಸೆ ನೀಡಿದೆ. ಆದರೆ ಇಲ್ಲಿಯ ತನಕ ಯಾರಿಗೂ ಹಣ ಪಾವತಿಯಾಗಿಲ್ಲ. ರೈತರು, ಹಣ್ಣು, ತರಕಾರಿ, ಹೂ ಬೆಳೆಗಾರರಿಗೆ ನೀಡಿದ ಸಹಾಯಧನದ ಭರವಸೆ ಹಾಗೆ ಉಳಿದಿದೆ ಎಂದ ಸಿದ್ದರಾಮಯ್ಯ, ಕೊರೊನಾ ನಿಯಂತ್ರಣದಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇತ್ತ ಬಡವ ಕಷ್ಟಕ್ಕೂ ಸ್ಪಂದಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ಮೇಲೆ ನನಗೆ ಯಾವುದೇ ನಂಬಿಕೆ, ವಿಶ್ವಾಸ ಉಳಿದಿಲ್ಲ ಎಂದರು.








