ಶ್ರೀರಾಮ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ
ಕೋಲಾರ: ಶ್ರೀರಾಮ ನವಮಿ ಅಂಗವಾಗಿ ಭವ್ಯ ಶೋಭಾಯತ್ರೆ ನಡೆಯುವಾಗ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ಪಟ್ಟಣದಲ್ಲಿ ನಡೆದಿದೆ.
ನಿನ್ನೆ ಶುಕ್ರವಾರ ಸಾಯಂಕಾಲ ಪಟ್ಟಣದಲ್ಲಿ ಶ್ರೀರಾಮ ನವಮಿ ಅಂಗವಾಗಿ ಲವಕುಶ ಜನ್ಮಭೂಮಿ ಪುಣ್ಯಕ್ಷೇತ್ರ ಟ್ರಸ್ಟ್ ವತಿಯಿಂದ ಅದ್ಧೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದ ಮೊದಲ ದಿನವಾದರಿಂದ ಭವ್ಯ ಶೋಭಾಯಾತ್ರೆ ಹಮ್ಮಿಕೊಳ್ಳಲಾಗುತ್ತು.
ಶೋಭಾಯಾತ್ರೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾಗು ಮುಳಬಾಗಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತಿತ್ತು. ಶೋಭಾಯಾತ್ರೆ ಸಂಜೆ 7.30ರ ಸುಮಾರಿಗೆ ಮುಳಬಾಗಿಲು ಪಟ್ಟಣದ ಜಹಂಗೀರ್ ಸರ್ಕಲ್ ಬಳಿ ಬರುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತವಾಗಿದೆ.
ರಸ್ತೆಯಲ್ಲಿ ಕತ್ತಲು ಆವರಿಸುತ್ತಿದ್ದ ಕೆಲವೇ ಕ್ಷಣಗಳಲ್ಲಿ ಶೋಭಾಯಾತ್ರೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪರಿಣಾಮ ಶೋಭಾಯಾತ್ರೆಯಲ್ಲಿದ್ದವರು ಚೆಲ್ಲಾಪಿಲ್ಲಿಯಾಗಿ ಓಡಲು ಆರಂಭಿಸಿದ್ದಾರೆ. ಕೆಲವರು ಕಲ್ಲು ತೂರಾರಟ ನಡೆಸಿದವರ ಮೇಲೆ ಪ್ರತಿಯಾಗಿ ಕಲ್ಲುತೂರಲು ಆರಂಭಿಸಿದ್ದಾರೆ.
ಅಲ್ಲದೇ ಕೆಲವು ಕಿಡಿಗೇಡಿಗಳು ರಸ್ತೆ ಬಳಿ ಇದ್ದ ಬೈಕ್‍ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ರಸ್ತೆ ಬದಿ ಇದ್ದ ಕೆಲವು ಕಾರ್‍ಗಳ ಮೇಲೆ ಪೊಲೀಸರ ವಾಹನಗಳ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಇದು ಎರಡು ಕೋಮಿನ ಜನರ ನಡುವೆ ಸಂಘರ್ಷಕ್ಕೆ ದಾರಿ ಮಾಡುವ ಸಾಧ್ಯತೆ ಇದ್ದ ಹಿನ್ನೆಲೆ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಶೋಭಾಯಾತ್ರೆ ಹಿನ್ನೆಲೆ ಈಗಾಗಲೇ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಿದ್ದ ಪರಿಣಾಮ ಪರಿಸ್ಥಿತಿಯನ್ನು ತಹಬದಿಗೆ ತರಲಾಯಿತು. ಸ್ಥಳಕ್ಕೆ ಬಂದ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಣ ಮಾಡಿ ಶೋಭಾಯಾತ್ರೆಯನ್ನು ಮುಂದುವರೆಯಲು ಅನುವು ಮಾಡಿಕೊಟ್ಟಿದ್ದಾರೆ. ಮುಳಬಾಗಿಲು ತಾಲೂಕು ಆವನಿ ಗ್ರಾಮಕ್ಕೆ ತಲುಪಬೇಗಿದ್ದ ಶೋಭಾಯಾತ್ರೆ ತಲುಪಿದೆ.
ಸದ್ಯ ಮುಳಬಾಗಿಲು ಪಟ್ಟಣದಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದು, ಸ್ಥಳಕ್ಕೆ ಎಸ್ಪಿ ದೇವರಾಜ್, ಕೇಂದ್ರ ವಲಯದ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಎರಡು ದಿನಗಳ ಕಾಲ ಮುಳಬಾಗಿಲು ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ಘಟನೆ ಸಂಬಂಧ ನಾಲ್ಕೈದು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








