HDK | ವೈದ್ಯ ಶಿಕ್ಷಣ ಉಳ್ಳವರದ್ದು ಎನ್ನುವ ಹಿಡನ್ ನೀತಿಯ ಸರಕಾರ
ಬೆಂಗಳೂರು : ಸರ್ಕಾರ ಸೇವೆ ಮಾಡುತ್ತಿದ್ದ ವೈದ್ಯರಿಗೆ ಮೀಸಲಾಗಿದ್ದ 112 DNB (Diplomate of national Board) ಸೀಟುಗಳನ್ನು ಅಖಿಲ ಭಾರತ ಕೋಟಾಗೆ (AIQ) ಹಿಂತಿರುಗಿಸಿರುವುದಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತೀವ್ರ ಕಿಡಿಕಾರಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಹೆಚ್ ಡಿ ಕುಮಾರಸ್ವಾಮಿ, ವೈದ್ಯ ಶಿಕ್ಷಣವು ಉಳ್ಳವರದ್ದು ಎನ್ನುವ ಹಿಡನ್ ನೀತಿಯ ಸರಕಾರವು, ಹಿಂದೆ ಮುಂದೆ ನೋಡದೇ ಈಗಾಗಲೇ ಸೇವೆ ಮಾಡುತ್ತಿದ್ದ ವೈದ್ಯರಿಗೆ ಮೀಸಲಾಗಿದ್ದ 112 DNB (Diplomate of national Board) ಸೀಟುಗಳನ್ನು ಅಖಿಲ ಭಾರತ ಕೋಟಾಗೆ (AIQ) ಹಿಂತಿರುಗಿಸಿ ಕೈ ತೊಳೆದುಕೊಂಡಿದೆ. 2022 ಫೆ.14ರಂದು ಈ ಘನಕಾರ್ಯ ಮಾಡಿದೆ.
ಆದರೆ, ಕೆಲ ದಿನಗಳಲ್ಲೇ DNB ಕೋರ್ಸಿಗೆ ಅಂಕಗಳ ಕಟ್ ಆಫ್ ಮಾಡಲಾಗಿದ್ದು, ಆ ನಂತರ ರಾಜ್ಯದ ಇನ್ನೂ 30 ವೈದ್ಯರು ಪ್ರವೇಶಕ್ಕೆ ಅರ್ಹತೆ ಗಳಿಸಿದ್ದರು. ಈಗ ಇವರೆಲ್ಲರೂ ಅರ್ಹತೆ ಇದ್ದರೂ ಪ್ರವೇಶ ಪಡೆಯಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ರಾಜ್ಯ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಅಂಕಗಳನ್ನು ಕಟ್ ಆಫ್ ಮಾಡುವ ಮೊದಲೇ ಸರಕಾರವು ಸೀಟುಗಳನ್ನು ವಾಪಸ್ ಕೊಟ್ಟುಬಿಟ್ಟ ಕಾರಣಕ್ಕೆ ಸೇವಾನಿರತ ವೈದ್ಯರಿಗೆ ಅನ್ಯಾಯವಾಗಿದೆ. ತಪ್ಪು ಮಾಡಿದ ಮೇಲೆ ಎಚ್ಚೆತ್ತ ಸರಕಾರ, ಈಗ ಆ 112 ಸೀಟುಗಳನ್ನು ವಾಪಸ್ ಕೊಡಿ ಎಂದು ಬೇಡಿದರೂ AIQ ಕೊಡುತ್ತಿಲ್ಲ.
2022 ಏಪ್ರಿಲ್ 5ರಂದು ಪತ್ರ ಬರೆದು ಸೀಟು ವಾಪಸಾತಿ ಪ್ರಶ್ನೆ ಇಲ್ಲ ಎಂದು ಕೇಂದ್ರ ತಿಳಿಸಿದೆ. ಇದು ಕರ್ನಾಟಕದ ದುಸ್ಥಿತಿ & ರಾಜ್ಯ ಸರಕಾರ ಮಾಡಿದ ದೊಡ್ಡ ಪ್ರಮಾದ.ರಾಜ್ಯ ಸರಕಾರವು, ಆರೋಗ್ಯ ಮತ್ತು ವೈದ್ಯ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದಕ್ಕೆ ಇದು ಒಂದು ಸ್ಯಾಂಪಲ್ ಅಷ್ಟೆ.
ಖಾಸಗಿ ವೈದ್ಯ ಕಾಲೇಜುಗಳನ್ನು ಉದ್ಧಾರ ಮಾಡುವ ಹುನ್ನಾರ ಇದರ ಹಿಂದೆ ಇದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವ ಕಾರಣಕ್ಕೂ 112 DNB ಸೀಟುಗಳನ್ನು ವಾಪಸ್ ಕೊಡಬಾರದಿತ್ತು. ಅವುಗಳನ್ನು ಇತರೆ ಅರ್ಹ ಅಭ್ಯರ್ಥಿಗಳಿಗೆ ಕೊಡಬಹುದಿತ್ತು. ಹಾಗೆ ಮಾಡಿದ್ದಿದ್ದರೆ ರಾಜ್ಯದ ಆರೋಗ್ಯ ವ್ಯವಸ್ಥೆಗೆ ದೊಡ್ಡ ಶಕ್ತಿಯೇ ಬರುತ್ತಿತ್ತು
ನೀಟ್ ಕಾರಣಕ್ಕೆ ಈಗಾಗಲೇ ಬಡ ಮಧ್ಯಮ ವರ್ಗದ ಮಕ್ಕಳಿಗೆ ವೈದ್ಯಶಿಕ್ಷಣ ಗಗನ ಕುಸುಮವಾಗಿದೆ. ಇದಕ್ಕೆ ಪೂರಕವಾಗಿ ಸರಕಾರವು ತಜ್ಞವೈದ್ಯ ಕೋರ್ಸುಗಳ ವಿಚಾರದಲ್ಲಿ ಹಣವಂತರಿಗೆ ಜೈ ಎನ್ನುತ್ತಿದೆ. ಇದು ಘೋರ ಅನ್ಯಾಯ ಮಾತ್ರವಲ್ಲ, ಜನದ್ರೋಹಿ ಹೆಜ್ಜೆ. ಕರ್ನಾಟಕಕ್ಕೆ ಬಹುದೊಡ್ಡ ನಷ್ಟ.
ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ವೇಳೆ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ಕೊರತೆ ವಿಪರೀತ ಎನ್ನುವಷ್ಟು ಇತ್ತು. ಸಕಾಲಕ್ಕೆ ಚಿಕಿತ್ಸೆ ಸಿಗದೇ ಅನೇಕರು ಜೀವ ಚೆಲ್ಲಿದ್ದರು. ಹೀಗಿದ್ದರೂ ನುರಿತ, ಕ್ಷಮತೆಯುಳ್ಳ ವೈದ್ಯರನ್ನು ಪಡೆಯುವ ಹೆಗ್ಗುರಿ ರಾಜ್ಯ ಸರಕಾರಕ್ಕೆ ಇಲ್ಲ.
ಆರೋಗ್ಯ ದಿನದ ನೆಪಕ್ಕೆ ಶುಭಾಶಯ ಕೋರಿದರೆ ಸಾಲದು. ನಮ್ಮ ವೈದ್ಯರ ಹಿತರಕ್ಷಿಸುವ ಬದ್ಧತೆಯೂ ಬೇಕು. ರಾಜ್ಯದ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುವ ಪ್ರಾಮಾಣಿಕತೆ ಅಗತ್ಯ. ಸರಕಾರ ಅಷ್ಟೂ ಸೀಟುಗಳನ್ನು ಮರಳಿ ಪಡೆಯಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ. H D Kumaraswamy slams karnataka state govt









