ಯುಪಿ ಚುನಾವಣೆ: ಮಾಯಾವತಿಯವರನ್ನ ಸಿಎಂ ಅಭ್ಯರ್ಥಿಯಾಗಿಸಿದ್ದೆವು, ಅವರು ಪ್ರತಿಕ್ರಿಯಿಸಲಿಲ್ಲ – ರಾಹುಲ್ ಗಾಂಧಿ
ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್ ಪಕ್ಷವು ಬಹುಜನ ಸಮಾಜವಾದಿ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರನ್ನು ಸಂಪರ್ಕಿಸಿತ್ತು. ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟಿದ್ದೆವು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ,
ಕಾಂಗ್ರೆಸ್ ಮುಖಂಡ ಕೆ ರಾಜು ಅವರು ಸಂಪಾದಿಸಿರುವ ದಲಿತ ಸತ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದಾರೆ. “ನಾವು ಮಾಯಾವತಿ ಅವರನ್ನು ಸಂಪರ್ಕಿಸಿ, ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡುತ್ತೇವೆ ಎಂದರೂ ಅವರು ಪ್ರತಿಕ್ರಿಯಿಸಲಿಲ್ಲ” “ತನ್ನನ್ನು ಬೆದರಿಸಲು ಸರ್ಕಾರವು ಸಿಬಿಐ, ಇಡಿ ಮತ್ತು ಪೆಗಾಸಸ್ ಅನ್ನು ಬಳಸುತ್ತದೆ ಎಂಬ ಭಯದಿಂದ ಬಿಎಸ್‌ಪಿ ನಾಯಕಿ ಪ್ರತಿಕ್ರಿಯಿಸಲಿಲ್ಲ” ಎಂದು ವಯನಾಡ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಜೀವ್ ಗಾಂಧಿ ಫೌಂಡೇಶನ್ ಸಹಯೋಗದಲ್ಲಿ ಸಮೃದ್ಧ ಭಾರತ್ ಫೌಂಡೇಶನ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಪ್ಯಾನೆಲಿಸ್ಟ್‌ಗಳಲ್ಲಿ ಅನುರಾಗ್ ಭಾಸ್ಕರ್ ಮತ್ತು ಜಿಗ್ನೇಶ್ ಮೇವಾನಿ ಭಾಗವಹಿಸಿದ್ದರು. ರಾಹುಲ್ ಗಾಂಧಿ ಅವರ ಹೇಳಿಕೆಗೆ ಬಿಎಸ್‌ಪಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರ್ಷದ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆ ನಡೆದಿದ್ದು, 403 ಸ್ಥಾನಗಳಲ್ಲಿ ಕೇವಲ ಎರಡನ್ನು ಗೆದ್ದು, ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುತೇಕ ಸೋತಿತ್ತು. ಮತ್ತೊಂದೆಡೆ, BSP ಕೇವಲ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು, ಭಾರತೀಯ ಜನತಾ ಪಕ್ಷ (BJP) ಎರಡನೇ ಅವಧಿಗೆ ವಿಜಯಶಾಲಿಯಾಗಿದೆ.








