ಪ್ರಚೋಧನಕಾರಿ ಭಾಷಣ ಅಥವಾ ದುಷ್ಕೃತ್ಯ ಎಸಗಿದರೆ ಕಠೀಣ ಕ್ರಮ
ದೊಡ್ಡಬಳ್ಳಾಪುರ: ಶ್ರೀರಾಮನವಮಿ ಅಂಗವಾಗಿ ಜರಗುವ ಕಾರ್ಯಕ್ರಮಗಳಲ್ಲಿ ಯಾರಾದರೂ ಪ್ರಚೋಧನಕಾರಿ ಭಾಷಣ ಅಥವಾ ದುಷ್ಕೃತ್ಯ ಎಸಗಿದರೆ ಅವರ ವಿರುದ್ಧ ಕಠೀಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನಾ ವಂಶಿಕೃಷ್ಣ ಖಡಖ್ ವಾರ್ನಿಂಗ್ ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಶೋಭಾಯಾತ್ರೆ ಹಿನ್ನೆಲೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ವಿವಿಧ ಸಮುದಾಯಗಳ ಮುಖಂಡರ ಜತೆ ಶಾಂತಿ ಸಭೆ ನಡೆಸಿದ್ದು, ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.
ಅಲ್ಲದೇ ಶೋಭಾಯಾತ್ರೆಯ ವೇಳೆ ಡಿ.ಜೆ ಬಳಕೆಯನ್ನು ನಿರ್ಬಂಧಿಸಲಾಗಿದೆ. ಒಂದು ವೇಳೆ ಬಳಸಿದರೆ ತಕ್ಷಣವೇ ಸೀಜ್ ಮಾಡಲಾಗುವುದು. ಹಾಗೇ ಮೆರವಣಿಗೆ ಮಾರ್ಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ನಿರ್ಬಂಧಿಸಲಾಗುವುದು. ಅಗತ್ಯ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ಸಂಘಟಕರಿಗೆ ನಿರ್ದೇಶನ ನೀಡಲಾಗಿದೆ.
ಇನ್ನೂ ಶೋಭಾಯಾತ್ರೆಯಲ್ಲಿ 2 ಕೆಎಸ್ಆರ್ಪಿ ತುಕಡಿ, 5 ಡಿಎಆರ್ ತುಕಡಿ, 25 ಮಂದಿ ಸಿಪಿಐ, ಪಿಎಸ್ಐಗಳು, 500 ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಮೆರವಣಿಗೆ ಆರಂಭ ಹಾಗೂ ಮುಕ್ತಾಯದ ಅವಧಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಂಘಟಕರಿಗೆ ಸೂಚಿಸಲಾಗಿದೆ. ಹಾಗೇ ಪೊಲೀಸ್ ಇಲಾಖೆಯಿಂದ ಅಲ್ಲಲ್ಲಿ ಡ್ರೋಣ್ ಕ್ಯಾಮರಾ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.








