ಬೆಂಗಳೂರು : ತಳವಾರ ಮತ್ತು ಪರಿವಾರ ಸಮುದಾಯಗಳನ್ನು ಇತರೆ ಹಿಂದೂಳಿದ ವರ್ಗಗಳ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಆದರೆ ರಾಜ್ಯ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯದವರನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ಪ್ರತಿಕ್ರಿಯೆಯನ್ನು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಅಲ್ಲದೆ ಆ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಲು ಒತ್ತಾಯಿಸಿ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

2014 ರಲ್ಲಿ ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿತ್ತು. ಆಗ ಸಚಿವ ಸಂಪುಟದಲ್ಲಿ ತಳವಾರ ಮತ್ತು ಪರಿವಾರ ಸಮುದಾಯಗಳು ಪರಿಶಿಷ್ಟ ಪಂಗಡಗಳಿಗೆ ಸೇರಿದ ಪಂಗಡಗಳು ಎಂದು ಅಂಗೀಕಾರ ಮಾಡಲಾಗಿತ್ತು. ಕೇಂದ್ರ ಸರ್ಕಾರಕ್ಕೆ ಅಧಿಸೂಚನೆ ಹೊರಡಿಸಲು ಪತ್ರ ಸಹ ಬರೆಯಲಾಗಿತ್ತು. ಅದರ ಪ್ರತಿಫಲವಾಗಿ ಕೇಂದ್ರ ಸರ್ಕಾರ ಆರು ವರ್ಷಗಳ ಬಳಿಕ ಅಧಿಸೂಚನೆ ಹೊರಡಿಸಿತ್ತು.

ಪ್ರಸ್ತುತ ರಾಜ್ಯದ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಾರಂಭವಾಗಿದೆ. ದಾಖಲಾತಿಗೆ ಜಾತಿ ಪ್ರಮಾಣ ಮುಖ್ಯವಾಗಿರುತ್ತದೆ. ಜೊತೆಗೆ ಕೆಪಿಎಸ್ ಸಿ ಮತ್ತಿತರ ಪ್ರಾಧಿಕಾರಗಳು ಉದ್ಯೋಗ ನೇಮಕಾತಿ ಆದೇಶ ಹೊರಡಿಸಿವೆ. ಹಾಗಾಗಿ ರಾಜ್ಯ ಸರ್ಕಾರ ಈ ವಿಚಾರವಾಗಿ ಕೂಡಲೇ ರಾಜ್ಯಪತ್ರ ಹೊರಡಿಸಿಬೇಕೆಂದು ಸಿದ್ದರಾಮಯ್ಯ ಪತ್ರದ ಮತ್ತು ಟ್ವೀಟ್ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.








