ಹೊಸದಿಲ್ಲಿ, ಮೇ 27: ಲಾಕ್ ಡೌನ್ ಹಿನ್ನೆಲೆಯಲ್ಲಿ ತೈಲ ಬೆಲೆ ದಾಖಲೆಯ ಮಟ್ಟದಲ್ಲಿ ಕುಸಿತ ಕಂಡಿದೆ. ಅತಿ ಹೆಚ್ಚು ತೈಲವನ್ನು ಅಮದು ಮಾಡಿಕೊಳ್ಳುವ ವಿಶ್ವದ ಮೂರನೇ ರಾಷ್ಟ್ರ ಭಾರತ ದರ ಕುಸಿದಿರುವ ಈ ಸಮಯದಲ್ಲಿ ತೈಲವನ್ನು ದಾಸ್ತಾನು ಇಟ್ಟುಕೊಳ್ಳಲು ಮುಂದಾಗಿದೆ.
ಈಗಾಗಲೇ 5.33 ಮಿಲಿಯನ್ ಟನ್ನಷ್ಟು ತೈಲವನ್ನು ದಾಸ್ತಾನು ಇಟ್ಟುಕೊಂಡಿದ್ದು, 8.5-9 ಮಿಲಿಯನ್ ಟನ್ನಷ್ಟು ತೈಲ ಗಲ್ಫ್ ಸೇರಿದಂತೆ ಹಲವು ದೇಶಗಳಿಂದ ಹಡಗಿನ ಮೂಲಕ ಭಾರತಕ್ಕೆ ಬರುತ್ತಿದೆ. ಭಾರತೀಯ ರಿಫೈನರ್ಸ್ ಈಗಾಗಲೇ ತಮ್ಮ ಕಮರ್ಷಿಯಲ್ ಟ್ಯಾಂಕ್ ಹಾಗೂ ಪೈಪ್ಲೈನ್ಗಳನ್ನು ತೈಲದಿಂದ ಭರ್ತಿಗೊಳಿಸಿದ್ದಾರೆ. ಹೀಗಾಗಿ ಭಾರತ ಈಗ ಅಮೆರಿಕಾದಲ್ಲಿ ತೈಲ ನಿಕ್ಷೇಪಗಳನ್ನು ರಚಿಸುವ ಯೋಜನೆಯ ಬಗ್ಗೆ ಚಿಂತನೆ ನಡೆಸುತ್ತಿದೆ.
ಈ ಬಗ್ಗೆ ಕೇಂದ್ರ ತೈಲ ಮತ್ತು ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದು, ಕಳೆದ ತಿಂಗಳು ಆಸ್ಟ್ರೇಲಿಯಾ ಕಡಿಮೆ ಬೆಲೆಯ ತೈಲವನ್ನು ಸಂಗ್ರಹಿಸಲು ಅಮೆರಿಕಾದಲ್ಲಿ ತುರ್ತು ತೈಲ ದಾಸ್ತಾನು ಘಟಕ ನಿರ್ಮಿಸುವ ಯೋಜನೆಯನ್ನು ಘೋಷಿಸಿತು. ಹಾಗಾಗಿ ಆಸ್ಟ್ರೇಲಿಯಾದಂತೆ ಭಾರತವೂ ಕೂಡ ಅಮೆರಿಕದಲ್ಲಿ ತೈಲ ಸಂಗ್ರಹ ಅದೇ ರೀತಿ ಇಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಿದ್ದಾರೆ.
ಮತ್ತೊಂದು ದೇಶದಲ್ಲಿ ತೈಲ ನಿಕ್ಷೇಪವನ್ನು ರಚಿಸುವ ಬಗ್ಗೆ ಸಾಧ್ಯತೆಗಳನ್ನು ಅನ್ವೇಷಿಸಲಾಗುತ್ತಿದ್ದು, ಬೆಲೆ ಕಡಿಮೆ ಇರುವಾಗಲೇ ತೈಲ ಸಂಗ್ರಹಿಸೋದಕ್ಕೆ ಕೇಂದ್ರ ಚಿಂತನೆ ನಡೆಸಿದೆ. ಆದರೆ ಕೆಲವು ವಾರಗಳಲ್ಲಿ ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ ಪೂರೈಕೆಯನ್ನು ಕಡಿಮೆ ಮಾಡಿ ತೈಲ ದರ ಏರಿಸಲು ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಭಾರತದ ವಾರ್ಷಿಕ ಅಗತ್ಯಗಳ ಶೇಕಡ 20ರಷ್ಟು ತೈಲ ಹಾಗೂ ತೈಲೋತ್ಪನ್ನವನ್ನು ಈಗಾಗಲೇ ದಾಸ್ತಾನು ಮಾಡಲಾಗಿದೆ. ಭಾರತ ತನ್ನ ತೈಲ ಅಗತ್ಯತೆಯ 80 ಪರ್ಸೆಂಟ್‌ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ.
ಅಮೆರಿಕಾದಂತಹ ದೇಶಗಳು ತೈಲ ನಿಕ್ಷೇಪವನ್ನು ಹೊಂದಿರುವುದರ ಹೊರತಾಗಿ, ದಾಸ್ತಾನು ಘಟಕದ ಸಾಮರ್ಥ್ಯವನ್ನು 6.5 ದಶಲಕ್ಷ ಟನ್‌ಗಳಿಗೆ ವಿಸ್ತರಿಸಲು ಹೊಸ ಕಾರ್ಯತಂತ್ರ ರೂಪಿಸುತ್ತಿದ್ದು, ಭಾರತವೂ ಸಂಗ್ರಹವನ್ನು ನಿರ್ಮಿಸಲು ಯೋಜಿಸಿದೆ. ಈ ಸೌಲಭ್ಯಗಳನ್ನು ನಿರ್ಮಿಸುವಲ್ಲಿ ಜಾಗತಿಕ ಹೂಡಿಕೆದಾರರ ಭಾಗವಹಿಸುವಿಕೆಯ ಬಗ್ಗೆ ಭಾರತ ಉತ್ಸುಕವಾಗಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.








