ಬೆಂಗಳೂರು, ಮೇ 27 : ಧಾರಾವಿ… ಇಲ್ಲಿಯವರೆಗೆ ಈ ಹೆಸರನ್ನು ಕೇಳಿದಾಗ ಮುಂಬೈನ ಒಂದು ಸ್ಲಮ್ ಎಂದು ನೆನಪಾಗುತ್ತಿತ್ತು. ಆದರೆ ಆದೀಗ ಕೊರೊನಾ ಹಾಟ್ ಸ್ಪಾಟ್ ಎಂಬ ಕುಖ್ಯಾತಿ ಗಳಿಸಿದೆ. ಧಾರವಿಯಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, ಏನು ಮಾಡಿದರೂ ಕೊರೋನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಪ್ರತಿ ದಿನ ಕೊರೋನಾ ಪ್ರಕರಣಗಳು ಮತ್ತಷ್ಟು ಏರಿಕೆಯಾಗುತ್ತಿದ್ದು, ಸೋಂಕು ಜನರಿಂದ ಜನರಿಗೆ ವೇಗವಾಗಿ ಹರಡಿ ಧಾರಾವಿ ಸ್ಮಶಾನವಾಗುವತ್ತ ಸಾಗುತ್ತಿದೆಯೇ ಎಂಬ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಇದರ ನಡುವೆಯೇ ಬೆಂಗಳೂರಿನ ಡಿಜೆ ಹಳ್ಳಿ ಮುಂಬೈನ ಧಾರಾವಿಯಾಗುವತ್ತ ಸಾಗುವುದೇ ಎಂಬ ಆತಂಕ ಕಾಡಲು ಶುರುವಾಗಿದೆ. ಇತ್ತೀಚಿನ ದಿನಗಳ ವರೆಗೆ ಹಸಿರು ವಲಯವೆಂದು ಗುರುತಿಸಿಕೊಂಡಿದ್ದ ಡಿಜೆ ಹಳ್ಳಿಯಲ್ಲಿ, 34 ವರ್ಷದ ಮಹಿಳೆಯೊಬ್ಬಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೀಗ ಆಕೆಯಿಂದ ಇಡೀ ಕೊಳಚೆ ಪ್ರದೇಶಕ್ಕೆ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿದ್ದು, ಆತಂಕಕ್ಕೆ ಎಡೆ ಮಾಡಿದೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಆ ಮಹಿಳೆ ಚಿಕಿತ್ಸೆಗಾಗಿ ಬೆಂಗಳೂರಿನ ಬೌರಿಂಗ್ ಆಸ್ಪತ್ರೆಗೆ ತೆರಳಿದ್ದಾಳೆ. ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ಆಕೆಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಡಿಜೆ ಹಳ್ಳಿಯ ಸ್ಲಮ್ ಒಂದರಲ್ಲಿ ಸ್ಲಂಬೋರ್ಡ್ ನೀಡಿರುವ ಕಟ್ಟಡದಲ್ಲಿ ಆಕೆ ವಾಸವಾಗಿದ್ದಾಳೆ. ಅದೇ ಕಟ್ಟಡದಲ್ಲಿ ನಾಲ್ಕು ಬಿಲ್ಡಿಂಗ್ ಗಳು ಇದ್ದು, ಒಂದು ಬಿಲ್ಡಿಂಗ್ ನಲ್ಲಿ ನಾಲ್ಕು ಮನೆಗಳಿವೆ. ಇದೀಗ ಅವರಿಗೆಲ್ಲ ಕೊರೊನಾ ಸೋಂಕಿನ ಭಯ ಕಾಡುತ್ತಿದೆ. ಮಹಿಳೆಗೆ ನಾಲ್ವರು ಮಕ್ಕಳಿದ್ದು, ಆಕೆಯ ತಂಗಿ ಮತ್ತು ಮಕ್ಕಳೂ ಸೇರಿ ಒಂದೇ ಮನೆಯಲ್ಲಿ 6 ಮಂದಿ ವಾಸವಾಗಿದ್ದಾರೆ. ಇದೀಗ ಅವರಿಗೂ ಕೊರೋನಾ ಸೋಂಕು ತಗುಲಿರುವ ಸಾಧ್ಯತೆ ಹೆಚ್ಚಾಗಿದೆ.
ಅಷ್ಟೇ ಅಲ್ಲ ಆಕೆಗೆ ಕೊರೊನಾ ಸೋಂಕು ಎಲ್ಲಿಂದ ತಗುಲಿತು ಎಂದು ಸಂಪರ್ಕ ಮೂಲ ಪತ್ತೆ ಹಚ್ಚಲು ಹೋದ ಅಧಿಕಾರಿಗಳಿಗೆ ಆಕೆಯ ಪ್ರಯಾಣ ಹಿಸ್ಟರಿ ತಲೆ ಕೆಡಿಸಿದೆ.
ಸೋಂಕಿತ ಮಹಿಳೆ ತರಕಾರಿ ವ್ಯಾಪಾರಿಯಾಗಿದ್ದು, ಬೇರೆ ಬೇರೆ ಪ್ರದೇಶಕ್ಕೆ ಹೋಗಿ ವ್ಯಾಪಾರ ಮಾಡಿದ್ದಾಳೆ. ಕೆಲವು ದಿನಗಳ ಹಿಂದೆ ಆಕೆ ಚನ್ನಪಟ್ಟಣಕ್ಕೆ ಪ್ರಯಾಣ ಮಾಡಿದ್ದಾಳೆ. ಅಧಿಕಾರಿಗಳು ಆಕೆ ಪ್ರಯಾಣಿಸಿದ ವಾಹನಗಳು, ಭೇಟಿಯಾದ ವ್ಯಕ್ತಿಗಳು, ಭೇಟಿಯಾದ ವ್ಯಕ್ತಿಗಳಿಂದ ಈಕೆಗೆ ಹರಡಿತ್ತೇ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯ ಮಗಳಿಗೆ ನಿಶ್ಚಿತಾರ್ಥವಾಗಿದ್ದು, ಆ ಸಮಾರಂಭಕ್ಕೆ ಮಾಗಡಿ ಮೂಲದ ಸಂಬಂಧಿಕರು ಆಗಮಿಸಿದ್ದರು ಎಂದು ಹೇಳಲಾಗುತ್ತಿದ್ದು ಅವರಿಂದ ಸೋಂಕು ಹರಡಿರಬಹುದೇ ಎಂದೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆಕೆ ತರಕಾರಿ ವ್ಯಾಪಾರಿಯಾಗಿರುವ ಕಾರಣ ಕೊರೊನಾ ಸೋಂಕಿತರ ಸಂಪರ್ಕದಿಂದ ಈಕೆಗೆ ಸೋಂಕು ತಗುಲಿರಬಹುದೇ ಎಂಬ ಅನುಮಾನವು ಹುಟ್ಟಿಕೊಂಡಿದೆ. ಇದೀಗ ಮಹಿಳೆಯ ಸಂಪರ್ಕದಿಂದ ಇಡೀ ಸ್ಲಮ್ ಗೆ ಕೊರೋನಾ ಸೋಂಕು ಹರಡುವ ಸಂಭವವಿದ್ದು, ಅಧಿಕಾರಿಗಳು ಆಕೆಯ ಜೊತೆ ಸಂಪರ್ಕವಿರಿಸಿಕೊಂಡವರನ್ನು ಕ್ವಾರಂಟೈನ್ ಗೆ ಒಳಪಡಿಸಿ ಸೋಂಕು ಹರಡದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಇಲ್ಲಿ ಸಮುದಾಯ ಕೊರೊನಾ ಹಬ್ಬಿರುವ ಲಕ್ಷಣಗಳಿರುವಾಗ ಸ್ವಲ್ಪ ಎಚ್ಚರ ತಪ್ಪಿದರೂ ಡಿಜೆ ಹಳ್ಳಿ ಮತ್ತೊಂದು ಧಾರಾವಿಯಾಗುವ ಅಪಾಯವಿದೆ.








