ಹೊಸದಿಲ್ಲಿ, ಮೇ 27 : ಚೀನಾ ಮೂಲದ ಕಂಪೆನಿಯ ‘ಟಿಕ್ ಟಾಕ್’ ಗೆ ಪರ್ಯಾಯವಾಗಿ ತಿಂಗಳ ಹಿಂದೆ ಆರಂಭಗೊಂಡ ಭಾರತದ ‘ ಮಿಟ್ರಾನ್’ ಆ್ಯಪ್ ಒಂದು ತಿಂಗಳಲ್ಲಿ ಐದು ಮಿಲಿಯನ್ ಗಿಂತಲೂ ಹೆಚ್ಚು ಡೌನ್‌ಲೋಡ್ ಆಗಿದೆ. ‘ಯೂಟ್ಯೂಬ್ ವರ್ಸಸ್ ಟಿಕ್ ಟಾಕ್’ ಇಂಟರ್ನೆಟ್ ಸಮರ ಮತ್ತು ಭಾರತೀಯರ ಚೀನೀ ವಸ್ತುಗಳನ್ನು ತಿರಸ್ಕರಿಸುವ ಮನೋಭಾವವು ‘ಮಿಟ್ರಾನ್’ ಎಂಬ ಹೊಸ ಅಪ್ಲಿಕೇಶನ್ ನ ಉದಯಕ್ಕೆ ಕಾರಣವಾಯಿತು. ಮಿಟ್ರಾನ್ ಆ್ಯಪ್ ಬಿಡುಗಡೆಯಾದ ಒಂದು ತಿಂಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಎರಡನೇ ಸ್ಥಾನವನ್ನು ಗಳಿಸಿದೆ.
ಮಿಟ್ರಾನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಇದುವರೆಗೆ 5 ಮಿಲಿಯನ್ ಡೌನ್‌ಲೋಡ್ ಮಾಡಲಾಗಿದ್ದು, ದಿನಕ್ಕೆ ಸರಾಸರಿ 5 ಲಕ್ಷ ಡೌನ್ ಲೋಡ್‌ಗಳನ್ನು ಆಗುತ್ತಿದೆ ಎಂದು ಮೊಬೈಲ್ ಮಾರ್ಕೆಟಿಂಗ್ ಮತ್ತು ಡಾಟಾ ಅನಾಲಿಟಿಕ್ಸ್ ಕಂಪನಿ ಗ್ರೋತ್ ಬಗ್‌ನ ದೀಪಕ್ ಅಬಾಟ್ ಹೇಳಿದ್ದಾರೆ. ಹಿಂದಿಯಲ್ಲಿ ಸ್ನೇಹಿತರನ್ನು ಮಿಟ್ರಾನ್ ಎಂದು ಕರೆದರೆ, ಪ್ರಧಾನಿ ಮೋದಿ ಅವರ ಹಲವಾರು ಭಾಷಣಗಳಲ್ಲಿ ದೇಶದ ಜನರನ್ನು ಉದ್ದೇಶಿಸಿ ಬಳಸುವ ಪದ ಇದಾಗಿದೆ. ಆ ಪದವನ್ನೇ ಭಾರತೀಯರೇ ಅಭಿವೃದ್ಧಿ ಪಡಿಸಿರುವ ಆ್ಯಪ್ ಗೆ ಇಡಲಾಗಿದೆ.
ಐಐಟಿ ರೂರ್ಕಿಯ ವಿದ್ಯಾರ್ಥಿಯು ಮಿಟ್ರಾನ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದಾನೆ ಮತ್ತು ಇದು ಚೀನಾ ಮೂಲದ ಕಂಪೆನಿಯ ‘ಟಿಕ್ ಟಾಕ್’ ಆ್ಯಪ್ ನಂತೆ ಕಾರ್ಯನಿರ್ವಹಿಸುತ್ತದೆ. ಕೊರೋನಾ ಸೋಂಕು ಜಗತ್ತಿನಾದ್ಯಂತ ಮರಣ ಮೃದಂಗವನ್ನು ಬಾರಿಸಲಾರಂಭಿಸಿದಾಗ, ಜನರು ಕೊರೊನಾ ವೈರಸ್ ಸೋಂಕಿನ ತವರು ಚೀನಾವನ್ನು ದೂಷಿಸಲಾರಂಭಿಸಿದರು ಮತ್ತು ಆ ದೇಶದ ವಸ್ತುಗಳನ್ನು ತಿರಸ್ಕರಿಸಬೇಕೆಂಬ ಬಗ್ಗೆ ಅಭಿಯಾನವನ್ನು ಆರಂಭಿಸಿದರು. ಭಾರತದಲ್ಲಿ ಬಹಳ ಜನಪ್ರಿಯವಾಗಿದ್ದ ಚೀನಾ ಆ್ಯಪ್ ಟಿಕ್ ಟಾಕ್ ನನ್ನು ತಿರಸ್ಕರಿಸಬೇಕೆಂದು ದೊಡ್ಡ ಮಟ್ಟದ ಅಭಿಯಾನವೇ ಆರಂಭವಾಯಿತು. ಆಗ ಚೀನಾ ಆ್ಯಪ್ ಗೆ ಪರ್ಯಾಯವಾಗಿ ತಿಂಗಳ ಹಿಂದೆ ಉದಯಿಸಿದ ಭಾರತದ ಆ್ಯಪ್ ‘ಮಿತ್ರಾನ್’.
ಇದೀಗ ಟಿಕ್ ಟಾಕ್’ಗೆ ಪರ್ಯಾಯವಾಗಿ ‘ಮಿತ್ರಾನ್’ ಎಂಬ ಆ್ಯಪ್ ಭಾರತೀಯರ ಮೊಬೈಲ್ ಗಳಲ್ಲಿ ಜಾಗ ಪಡೆಯಲಾರಂಭಿಸಿದೆ. ಭಾರತೀಯರೇ ಸಿದ್ಧಪಡಿಸಿರುವ ‘ಮಿತ್ರಾನ್’ ಟಿಕ್ ಟಾಕ್ ಗಿಂತ ಕಡಿಮೆ ಸೈಜ್ ಹೊಂದಿದ್ದು, ಬಳಕೆ ಕೂಡಾ ಸುಲಭವಾಗಿದೆ. ಇದನ್ನು ಡೌನ್‌ಲೋಡ್ ಮಾಡಿ ಉಪಯೋಗಿಸುತ್ತಿರುವವರು ಇದರ ಕಾರ್ಯ ವೈಖರಿಯನ್ನು ಮೆಚ್ಚಿದ್ದಾರೆ.








