ಹೊಸ ದಿಲ್ಲಿ, ಮೇ 27 : ಸಾಮಾಜಿಕ ಜಾಲತಾಣಗಳು ಇಂದಿನ ಕಾಲದ ಬಹುತೇಕ ಜನರ ಕಾಲಕಳೆಯುವ ತಾಣವಾಗಿದೆ. ಒಂದೆಡೆ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಒಳ್ಳೆಯ ವೇದಿಕೆಯಾಗಿದ್ದರೆ, ಇನ್ನೊಂದೆಡೆ ಅದು ಅಪಾಯಕಾರಿಯಾಗಿಯೂ ಪರಿಣಮಿಸಿದೆ. ನಮ್ಮ ಎಚ್ಚರಿಕೆಯಲ್ಲಿ ನಾವಿದ್ದರೆ ಸಾಕು ಎಂದರೂ ಪ್ರೊಫೈಲ್ ಫೋಟೋಗಳನ್ನು ಜೂಮ್ ಮಾಡಿ ನೋಡುವ, ಡೌನ್ ಲೋಡ್ ಮಾಡಿ ಮಾರ್ಪಡಿಸುವ ಪ್ರವೃತ್ತಿ ಅನೇಕರಿಗೆ ಇರುತ್ತದೆ. ಅದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಫೇಸ್ ಬುಕ್ ತನ್ನ ಬಳಕೆದಾರರಿಗಾಗಿ ಹೊಸದಾದ ಪ್ರೊಫೈಲ್ ಲಾಕ್ ಎಂಬ ವೈಶಿಷ್ಟ್ಯವನ್ನು ಹೊರತಂದಿದೆ.
ಭಾರತದಲ್ಲಿರುವ ಬಳಕೆದಾರರಿಗಾಗಿಯೇ ಫೇಸ್ಬುಕ್ ಈ ಹೊಸ ವೈಶಿಷ್ಟ್ಯವನ್ನು ಹೊರತಂದಿದ್ದು ಇನ್ನು ಮುಂದೆ ಅಪರಿಚಿತರು ಪ್ರೊಫೈಲ್ ಪೋಟೋ ಅಥವಾ ಕವರ್ ಫೋಟೋವನ್ನು ಜೂಮ್ ಮಾಡಲು, ಹಂಚಿಕೊಳ್ಳಲು ಮತ್ತು ಡೌನ್ ಲೋಡ್ ಮಾಡಲು ಸಾಧ್ಯವಿಲ್ಲ. ಪ್ರೊಫೈಲ್ ಲಾಕ್ ಅನ್ನು ಬಳಸಲು ಆರಂಭಿಸಿದರೆ, ಬಳಕೆದಾರರ ಸ್ನೇಹಿತರಲ್ಲದವರು ಪ್ರೊಫೈಲ್ ಫೋಟೋ ಅಥವಾ ಕವರ್ ಫೋಟೋವನ್ನು ಜೂಮ್ ಮಾಡಲು, ಹಂಚಿಕೊಳ್ಳಲು ಮತ್ತು ಡೌನ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ ಬಳಕೆದಾರರ ಟೈಮ್ ಲೈನ್ ನಲ್ಲಿರುವ ಫೋಟೋಗಳು ಮತ್ತು ಪೋಸ್ಟ್ ಗಳನ್ನು ನೋಡಲು ಸಾಧ್ಯವಾಗುವುದಿಲ್ಲ. ಭಾರತದ ಜನರು ಅದರಲ್ಲೂ ವಿಶೇಷವಾಗಿ ಮಹಿಳೆಯರ ಗೌಪ್ಯತೆಯನ್ನು ರಕ್ಷಿಸುವ ಕಾಳಜಿಯಿಂದ ಈ ಒಂದು ವಿಶೇಷವಾದ ಪ್ರೊಫೈಲ್ ಲಾಕ್ ವೈಶಿಷ್ಟ್ಯವನ್ನು ಪರಿಚಯಿಸಲಾಗಿದೆ ಎಂದು ಫೇಸ್ಬುಕ್ ಇಂಡಿಯಾದ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಖಿ ದಾಸ್ ಹೇಳಿದ್ದಾರೆ.
ಪ್ರೊಫೈಲ್ ಲಾಕ್ ಅನ್ನು ಬಳಸಲು ಮೊದಲು ನಿಮ್ಮ ಪ್ರೊಫೈಲ್ ಪೇಜ್ ಅನ್ನು ಓಪನ್ ಮಾಡಿ ನಂತರ ನಿಮ್ಮ ಹೆಸರಿನ ಕೆಳಗೆ ಕಾಣುವ ಮೋರ್ ಅನ್ನು ಕ್ಲಿಕ್ ಮಾಡಿ. ಅಲ್ಲಿ ನಿಮಗೆ ಪ್ರೊಫೈಲ್ ಲಾಕ್ ಎಂಬ ಆಯ್ಕೆ ಸಿಗುತ್ತದೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಪ್ರೊಫೈಲ್ ಲಾಕ್ ಆಗುತ್ತದೆ.
ನಿಮ್ಮ ಪ್ರೊಫೈಲ್ ಲಾಕ್ ಆಗಿದ್ದರೆ, ನಿಮ್ಮ ಸ್ನೇಹಿತರಲ್ಲದವರಿಗೆ ಗುರುತಿಸುವಷ್ಟು ಮಾತ್ರ ದೊಡ್ಡದಾಗಿ ಕಾಣುತ್ತದೆ. ಅಷ್ಟೇ ಅಲ್ಲ ಫೋಟೋವನ್ನು ಜೂಮ್ ಆಗಲಿ, ಶೇರ್ ಆಗಲಿ ಅಥವಾ ಡೌನ್ ಲೋಡ್ ಆಗಲಿ ಮಾಡಲು ಸಾಧ್ಯವಿಲ್ಲ. ಟೈಮ್ ಲೈನ್ನಲ್ಲಿರುವ ಫೋಟೋ ಅಥವಾ ಪೋಸ್ಟ್ ಕೂಡ ಸ್ನೇಹಿತರಲ್ಲದವರಿಗೆ ಕಾಣಿಸುವುದು ಇಲ್ಲ.
ಈ ಹಿಂದೆ ಫೇಸ್ ಬುಕ್ ಪ್ರೊಫೈಲ್ ಗಾರ್ಡ್ ಎಂಬ ವೈಶಿಷ್ಟ್ಯ ವನ್ನು ಪರಿಚಯಿಸಿತ್ತು. ಅದನ್ನು ಬಳಸುವ ಬಳಕೆದಾರರ ಫೋಟೋ ಸ್ನೇಹಿತರಲ್ಲದವರಿಗೆ ಪೂರ್ಣಪ್ರಮಾಣದಲ್ಲಿ ಕಾಣುತ್ತಿದ್ದರೂ ಫೋಟೋವನ್ನು ಜೂಮ್ ಅಥವಾ ಡೌನ್ ಲೋಡ್ ಮಾಡಲು ಆಗುತ್ತಿರಲಿಲ್ಲ. ‘ಪ್ರೊಫೈಲ್ ಲಾಕ್’ ಎಂಬ ಹೊಸ ವೈಶಿಷ್ಟ್ಯದಿಂದ ಫೇಸ್ ಬುಕ್ ಅನ್ನು ಮಹಿಳೆಯರು ಅಂಜಿಕೆಯಿಲ್ಲದೆ ಬಳಸಬಹುದಾಗಿದೆ.








