ಭಾರತೀಯ ಚಿತ್ರರಂಗ ಕಾತರದಿಂದ ಎದುರು ನೋಡುತ್ತಿರುವ ಬಹು ನಿರೀಕ್ಷಿತ ಚಿತ್ರಗಳ ಪೈಕಿ ಕೆಜಿಎಫ್ ಚಾಪ್ಟರ್ 2 ಒಂದು. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ 2’ ಬಿಡುಗಡೆಗೆ ದೇಶದಾದ್ಯಂತ ಅಭಿಮಾನಿಗಳು ಕಾದಿದ್ದಾರೆ. ಅಕ್ಟೋಬರ್ 23ರಂದು ಸಿನಿಮಾ ಬಿಡುಗಡೆ ಆಗಲಿದ್ದು, ಲಾಕ್ ಡೌನ್ ನಡುವೆ ಹಾಡುಗಳ ತಯಾರಿ ಕಾರ್ಯ ಕೂಡ ಆರಂಭವಾಗಿದೆ.
ತಗ್ಗದ ಕೆಜಿಎಫ್-2 ಹವಾ
ಕೆಜಿಎಫ್ -1 ರಿಲೀಸ್ ಆಗಿ ಒಂದೂವರೆ ವರ್ಷ ಕಳೆದರೂ ಅಭಿಮಾನಿಗಳಲ್ಲಿ ಮಾತ್ರ ಚಿತ್ರದ ಬಗ್ಗೆ ಕ್ರೇಜ್ ಕಡಿಮೆ ಆಗಿಲ್ಲ. ಇದಕ್ಕೆ ಹತ್ತು ಹಲವು ಕಾರಣಗಳಿವೆ. ಟಿಕ್ ಟಾಕ್ ನಲ್ಲೂ ಕೆಜಿಎಫ್ ಹವಾ ಜೋರಾಗಿದ್ದು, ಎಲ್ಲೆಲ್ಲೂ ರಾಕಿಭಾಯ್ ರದ್ದೇ ಸೌಂಡ್ ಕೇಳಿಬರುತ್ತಿದೆ.
ಉಗುರಿನ ಮೇಲೆ ಕೆಜಿಎಫ್ ಚಾಪ್ಟರ್ 2
ಅಭಿಮಾನಿಗಳು ತಮ್ಮ ನೆಚ್ಚಿನ ಸ್ಟಾರ್ ನಟ ಮತ್ತು ಅವರ ಚಿತ್ರಗಳ ಕುರಿತಾದ ತಮ್ಮ ಅಭಿಮಾನವನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸುತ್ತಾರೆ. ಕೆಲವರು ಅವರ ಹೆಸರು, ಚಿತ್ರಗಳನ್ನು ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಅದರಂತೆ ದೆಹಲಿಯ ರಿದಮ್ ಅಹ್ಲುವಾಲಿಯಾ ಎಂಬ ಮಹಿಳೆ ನೈಲ್ ಪಾಲಿಶ್ ನಲ್ಲಿ ತಮ್ಮ ಅಭಿಮಾನ ಮೆರೆದಿದ್ದಾರೆ.
ಅಹ್ಲುವಾಲಿಯಾ ಅವರು, ಒಂದು ಉಗುರಿನ ಮೇಲೆ ಕೆಜಿಎಫ್ ಚಾಪ್ಟರ್ 2 ಎಂದು ಚಿತ್ರದ ಹೆಸರನ್ನು ಬರೆದಿದ್ದಾರೆ. ಈ ನೈಲ್ ಪಾಲಿಶ್‌ನಲ್ಲಿ ಬಳಸಿರುವ ಬಣ್ಣ, ಕೆಜಿಎಫ್ ಚಿತ್ರದ ಪೋಸ್ಟರ್‌ನಲ್ಲಿ ಇದ್ದಂತೆಯೇ ಇದೆ. ಮತ್ತೊಂದು ಬೆರಳಿನ ಮೇಲೆ ಅವರು ಯಶ್ ಚಿತ್ರವನ್ನು ಬಿಡಿಸಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರವಾಗಿದೆ.








