ನವದೆಹಲಿ : ದೇಶದಾದ್ಯಂತ ಕೊರೊನಾ ಮಹಾಮಾರಿ ಆರ್ಭಟ ಮುಂದುವರಿದಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 6387 ಹೊಸ ಕೊರೊನಾ ಪ್ರಕರಣಗಳು ದೃಢಪಟ್ಟಿವೆ. ಹೆಮ್ಮಾರಿ ವೈರಸ್ ಗೆ 170 ಜನ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
6387 ಹೊಸ ಕೊರೊನಾ ಪ್ರಕರಣಗಳೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. ಇದರಲ್ಲಿ 83,004 ಸಕ್ರಿಯ ಪ್ರಕರಣಗಳಿದ್ದು, 64,425 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇನ್ನು ಈವರೆಗೆ 4,337 ಮಂದಿ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ಇನ್ನು ಮಹಾರಾಷ್ಟ್ರದಲ್ಲಿ ಕಿಲ್ಲರ್ ಕೊರೊನಾ ಆರ್ಭಟಿಸುತ್ತಿದ್ದು, ಈವರೆಗೆ 54,758 ಮಂದಿಗೆ ಸೋಂಕು ತಗುಲಿದೆ. ಇದರಲ್ಲಿ 1,792 ಸೋಂಕಿತರು ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17,728ಕ್ಕೆ ಏರಿಕೆಯಾಗಿದ್ದು, ಗುಜರಾತ್ ನಲ್ಲಿ 14,821, ದೆಹಲಿಯಲ್ಲಿ 14,465 ತಲುಪಿದೆ.
ಆತಂಕಕಾರಿ ವಿಷಯ ಏನಂದರೇ ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸತತವಾಗಿ ಪ್ರತಿ ದಿನ ಆರು ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಅದರಲ್ಲೂ ಲಾಕ್ ಡೌನ್ ಸಡಿಲಿಕೆ ಬಳಿಕ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಸರ್ಕಾರಗಳಿಗೆ ತಲೆ ಬಿಸಿ ತಂದಿದೆ.








