ಹೈದರಾಬಾದ್ : ತೆಲಂಗಾಣದ ವಾರಂಗಲ್ ನಲ್ಲಿ ಬಾವಿಯೊಂದರಲ್ಲಿ ಒಂಭತ್ತು ಮೃತ ದೇಹಗಳು ಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರೇಯಸಿಯ ಕೊಲೆಯನ್ನು ಮುಚ್ಚಿ ಹಾಕಲು ಬರೋಬ್ಬರಿ 9 ಮಂದಿಯನ್ನು ಕೊಲೆ ಮಾಡಿರುವ ಸತ್ಯಾಂಶ ತನಿಖೆಯಲ್ಲಿ ಬಯಲಾಗಿದೆ.
ಇದೇ ತಿಂಗಳ 21, 22 ರಂದು ವಾರಂಗಲ್ ನ ಗೊರ್ರೆಕುಂಟಾ ಗ್ರಾಮದ ಬಾವಿಯಲ್ಲಿ 9 ಮೃತದೇಗಳು ಪತ್ತೆಯಾಗಿದ್ದವು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸದ್ಯ ಸಂಜಯ್ ಎಂಬೋರನ್ನು ಬಂಧಿಸಿದ್ದಾರೆ. ಈತನನ್ನು ವಿಚಾರಣೆ ನಡೆಸಿದಾಗ ತನ್ನ ಪ್ರೇಯಸಿ ಕೊಲೆಯನ್ನು ಮರೆ ಮಾಚಲು ಆಕೆಯ ಕುಟುಂಬದವರನ್ನು ಸೇರಿ ಮೂವರು ಸಹೋದ್ಯೋಗಿಗಳನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಬಂಧಿತ ಸಂಜಯ್ ಕುಮಾರ್ ಯಾದವ್ ಬಿಹಾರ್ ಮೂಲದವನಾಗಿದ್ದು, ಈತ ಗೊರ್ರೆಕುಂಟಾನಲ್ಲಿರುವ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಇದೇ ಕಾರ್ಖಾನೆಯಲ್ಲಿ ಮೃತ ಮಕ್ಸೂದ್ ಆಲಂ ಸಂಬಂಧಿ ರಫಿಕಾ ಕೂಡ ಕೆಲಸ ಮಾಡುತ್ತಿದ್ದಳು. ಈ ವೇಳೆ ಸಂಜಯ್ – ರಫಿಕಾ ನಡುವೆ ಪ್ರೀತಿ ಹುಟ್ಟಿದೆ. ಆದ್ರೆ ರಫಿಕಾಗೆ ಈಗಾಗಲೇ ಮದುವೆ ಆಗಿ ಮೂವರು ಮಕ್ಕಳಿದ್ದರು. ಇವರ ಪ್ರೇಮ ವಿಚಾರ ಮನೆಯಲ್ಲಿ ಗೊತ್ತಾಗಿದ್ದು, ರಫಿಕಾ ತನ್ನ ಮೂವರು ಮಕ್ಕಳೊಂದಿಗೆ ಯಾದವ್ ಮನೆಗೆ ಹೋಗಿದ್ದಾಳೆ.
ಆದ್ರೆ ಇತ್ತೀಚೆಗೆ ಆರೋಪಿ ಸಂಜಯ್ ರಫಿಕಾ ಮಗಳ ಜೊತೆ ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದನಂತೆ. ಇದೇ ವಿಚಾರವಾಗಿ ರಫಿಕಾ ಹಾಗೂ ಸಂಜಯ್ ನಡುವೆ ಗಲಾಟೆ ಆಗಿದೆ. ಕೊನೆಗೆ ರಫಿಕಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ ಸಂಜಯ್, ರಫಿಕಾಳಿಗೆ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ, ಮದುವೆ ಬಗ್ಗೆ ತಮ್ಮ ಸಂಬಂಧಿಕರ ಜೊತೆ ಮಾತನಾಡುವುದಾಗಿ ಹೇಳಿ ಮಾರ್ಚ್ 7 ರಂದು ಗರಿಬ್ ರಾಥ್ ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿದ್ದಾನೆ. ಪ್ರಯಾಣದ ಮಧ್ಯೆದಲ್ಲಿ ಸಂಜಯ್ ರಫಿಕಾಗೆ ನಿದ್ದೆ ಮಾತ್ರೆಗಳನ್ನು ಮಿಕ್ಸ್ ಮಾಡಿದ್ದ ಮಜ್ಜಿಗೆಯನ್ನು ನೀಡಿದ್ದಾನೆ. ಅದನ್ನು ಕುಡಿದ ರಫಿಕಾ ಪ್ರಜ್ಞೆ ತಪ್ಪಿದ್ದು, ತಕ್ಷಣ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲಕ ಹಾದುಹೋಗುತ್ತಿದ್ದಾಗ ಆಕೆಯ ಶವವನ್ನು ಹೊರಗೆ ಎಸೆದಿದ್ದಾನೆ.
ಬಳಿಕ ಮನೆಗೆ ವಾಪಸ್ ಆಗ ಸಂಜಯ್, ಮಕ್ಸೂದ್ ಕುಟುಂಬಕ್ಕೆ ರಫಿಕಾ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ. ಕೆಲವು ದಿನಗಳ ನಂತರ ಹಿಂದಿರುಗುತ್ತಾಳೆ ಎಂದು ಹೇಳಿದ್ದಾನೆ. ಆದರೆ ಮಕ್ಸೂದ್ ಮತ್ತು ಪತ್ನಿ ನಿಶಾ ರಫಿಕಾ ಎಲ್ಲಿ, ನೀನು ಏಕೆ ಅಲ್ಲಿ ಬಿಟ್ಟು ಬಂದೆ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ನಿಶಾ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಸಂಜಯ್, ಮಕ್ಸೂದ್ ಕುಟುಂಬವನ್ನು ಹತ್ಯೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆ.
ಅದರಂತೆ ಮೇ 20 ಮಕ್ಸೂದ್ ಮಗನ ಹುಟ್ಟುಹಬ್ಬದಂದು ಯಾದವ್ 50-60 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಮನೆಗೆ ಬಂದು, ಊಟದಲ್ಲಿ ಮಿಕ್ಸ್ ಮಾಡಿದ್ದಾನೆ. ಆ ಊಟವನ್ನು ಮಾಡಿದ್ದ ಮಕ್ಸೂದ್ ಕುಟುಂಬ ಮತ್ತೆ ಬಿಹಾರದ ಕಾರ್ಮಿಕರು ನಿದ್ದೆ ಮಾಡಿದ್ದಾರೆ. ನಂತರ ಆರೋಪಿ ಯಾದವ್ ಮುಂಜಾನೆ 2 ಗಂಟೆಗೆ ಎದ್ದು ಎಲ್ಲರನ್ನು ಗೋಣಿಚೀಲದಲ್ಲಿ ಹಾಕಿಕೊಂಡು ಬಾವಿ ಬಳಿ ಎಳೆದುಕೊಂಡು ಹೋಗಿ ಒಬ್ಬೊಬ್ಬರಾಗಿ ಬಾವಿಗೆ ಎಸೆದಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೇ 20ರ ಆರೋಪಿ ಸಂಜಯ್ ಮಕ್ಸೂದ್ ಮನೆಯಿಂದ ಹೊರ ಬಂದಿದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆಗ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಸದ್ಯಕ್ಕೆ ಪೊಲೀಸರು ಆತನನ್ನು ಬಂಧಿಸಿದ್ದಾರೆ.






