ಬೆಂಗಳೂರು : ಕೋವಿಡ್19 ಸಂಚಾರಿ ಪರೀಕ್ಷಾ ಘಟಕಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದರು. ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರತಿನಿತ್ಯವು ನೂರು ಪ್ರಕರಣಗಳು ದಾಖಲು ಆಗುತ್ತಿವೆ. ಹಾಗಾಗಿ ಪರೀಕ್ಷೆಗಳು ವೇಗವಾಗಿ ನಡೆಯಬೇಕಿದೆ. ಆ ಹಿನ್ನೆಲೆಯಲ್ಲಿ ಇಂದು ಆರೋಗ್ಯ ಇಲಾಖೆ ಹಾಗೂ ವಿಪ್ರೋ ಜಿ ಇ ಹೆಲ್ತ್ ಕೇರ್ ಸಹಯೋಗದಲ್ಲಿ ಕೋವಿಡ್ 19 ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಗಳನ್ನು ಸಿ.ಎಂ ಬಿ.ಎಸ್ ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ಬಳಿಕ ಮಾತನಾಡಿದ ಅವರು, 15 ಸಂಚಾರಿ ಸ್ಮಾರ್ಟ್ ಕಿಯೋಸ್ಕ್ ಗಳನ್ನು ಸ್ಥಾಪನೆ ಮಾಡಲಿದ್ದೇವೆ.
ಈ ಸಂಚಾರಿ ಘಟಕಗಳಿಂದ ಕೊರೊನಾ ಪರೀಕ್ಷೆ ನಡೆಸಲು ಹೆಚ್ಚು ಅನುಕೂಲವಾಗಿದೆ. ಸರ್ಕಾರದ ಜೊತೆಗೆ ಈ ಕೆಲಸಕ್ಕೆ ಕೈ ಜೋಡಿಸಿರುವ ಸ್ಮಾರ್ಟ್ ಕಿಯೋಸ್ಕ್ ಕಂಪನಿ ಬೇರೆ ಖಾಸಗಿ ಕಂಪನಿಗಳಿಗೆ ಮಾದರಿಯಾಗಬೇಕು. ಕೊರೊನಾ ಪರೀಕ್ಷೆ ನಡೆಸುವುದರಲ್ಲಿ ನಾವು ದೇಶ ಬೇರೆ ರಾಜ್ಯಗಳಿಗಿಂತ ಪ್ರಥಮ ಸ್ಥಾನದಲ್ಲಿದ್ದೇವೆ. ಅಲ್ಲದೆ ಕೊರೊನಾ ನಿಯಂತ್ರಣ ಮಾಡುವುದರಲ್ಲಿ ನಮ್ಮ ರಾಜ್ಯ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರವೇ ಹೇಳಿದೆ ಎಂದು ಬಿಎಸ್ ಯಡಿಯೂರಪ್ಪ ಹೇಳಿದರು. ಉದ್ಘಾಟನ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿಗಳಾದ, ಡಾ. ಸಿ ಎನ್ ಅಶ್ವತ್ಥ್ ನಾರಾಯಣ್, ಗೋವಿಂದ ಕಾರಜೋಳ ಮತ್ತಿತರರು ಉಪಸ್ಥಿತರಿದ್ದರು.








