ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ, ರೈಲ್ವೆ ರಕ್ಷಣಾ ಪಡೆಯ ಅಧಿಕಾರಿ ನಿಧನ
ಶ್ರೀನಗರ : ಸೋಮವಾರ(ಏ.18) ರಂದು ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿದ್ದ, ರೈಲ್ವೆ ರಕ್ಷಣಾ ಪಡೆಯ ಅಧಿಕಾರಿ ಶ್ರೀನಗರದ ಎಸ್‌ಹೆಚ್‌ಎಂಎಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕಾಕಾಪುರ ಪ್ರದೇಶದಲ್ಲಿ ಉಗ್ರರು ದಾಳಿ ನಡೆಸಿದ್ದರು.ಈ ವೇಳೆ ಗಾಯಗೊಂಡಿದ್ದ ರೈಲ್ವೆ ರಕ್ಷಣಾ ಪಡೆಯ ಸಬ್ ಇನ್ಸ್‌ಪೆಕ್ಟರ್ ದೇವ್ ರಾಜ್ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಇವರು ಎಸ್‌ಎಂಹೆಚ್‌ಎಸ್‌ನ ಐಸಿಯು ವಾರ್ಡ್ 17ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 18ರ ಸೋಮವಾರ ಸಂಜೆ ದಕ್ಷಿಣ ಕಾಶ್ಮೀರದ ಕಾಕಪೋರಾ ಪ್ರದೇಶದಲ್ಲಿ ಬಂದೂಕುಧಾರಿಯೊಬ್ಬ ಬಂದು ರೈಲ್ವೆ ರಕ್ಷಣಾ ಪಡೆಯ ಇಬ್ಬರು ಸಿಬ್ಬಂದಿಯ ಮೇಲೆ ಹಿಂದಿನಿಂದ ಗುಂಡು ಹಾರಿಸಿದ್ದ. ಘಟನೆಯಲ್ಲಿ ಓರ್ವರು(ಹೆಚ್‌ಸಿ ಸುರೀಂದರ್ ಕುಮಾರ್ )ಸಾವನ್ನಪ್ಪಿದ್ದು, ಸಬ್ ಇನ್ಸ್‌ಪೆಕ್ಟರ್ ದೇವ್‌ರಾಜ್ ಭೀರವಾಗಿ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.








