ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಅವರ 2ನೇ ಸಿನಿಮಾ ಘೋಷಣೆಯಾಗಿದ್ದು, ಈ ಬಾರಿ ಸುಕ್ಕಾ ಸೂರಿ ಜೊತೆ ಅಭಿ ‘ಬ್ಯಾಡ್ ಮ್ಯಾನರ್ಸ್’ ತೋರಿಸೋಕೆ ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮಜಯಂತಿ ಪ್ರಯುಕ್ತ ಅಂದರೆ ಮೇ 29ಕ್ಕೆ ಈ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಮಾಡೋ ಮೂಲಕ ಸಿನಿಮಾ ಅಧಿಕೃತವಾಗಿ ಚಾಲನೆಗೊಳಲಿದೆ.
‘ಅಮರ್’ ಸಿನಿಮಾ ಅಭಿಷೇಕ್ ಚೊಚ್ಚಲ ಚಿತ್ರವಾಗಿತ್ತು, ದುರದೃಷ್ಟವಶಾತ್ ಅವರಿಗೆ ಬ್ರೇಕ್ ನೀಡಲಿಲ್ಲ. ಹೀಗಾಗಿ ಒಂದು ಬ್ರೇಕ್ ಗಾಗಿ ಕಾಯುತ್ತಿರುವ ಅಭಿ, ಈಗ ದುನಿಯಾ ಸೂರಿ ಗರಡಿಗೆ ಸೇರಿದ್ದಾರೆ. ‘ಸುಕ್ಕಾ ಸೂರಿ’ ಖ್ಯಾತಿಯ ಡೈರೆಕ್ಟರ್ ಸೂರಿ, ರಾ ಶೈಲಿಯ ಸಿನಿಮಾಗಳಿಗೆ ಕೇರ್ ಆಫ್ ಅಡ್ರೆಸ್. ದುನಿಯಾ ವಿಜಯ್ ಅವರ ‘ದುನಿಯಾ’ ಸಿನಿಮಾ ನಿರ್ದೇಶನ ಮಾಡಿದ್ದು, ‘ಟಗರು’ ಸೂತ್ರಧಾರರೂ ಕೂಡ ಈ ಸೂರಿಯೇ. ಸಾಕಷ್ಟು ಹೊಸ ಪ್ರತಿಭೆಗಳಿಗೆ ಸೂರಿ ಜೊತೆಗೆ ಸಿನಿಮಾ ಮಾಡಿದ ಕಾರಣಕ್ಕೆ ಬ್ರೇಕ್ ಸಿಕ್ಕಿದೆ. ಸದ್ಯ ರಿಲೀಸ್ ಆಗಿರುವ ಬ್ಯಾಡ್ ಮ್ಯಾನರ್ಸ್ ಫಸ್ಟ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಪಾಪ್ ಕಾರ್ನ್ ಮಂಕಿ ಟೈಗರ್ ಟೀಂ ಜೊತೆ ಅಭಿ
ಬ್ಯಾಡ್ ಮ್ಯಾನರ್ಸ್ ಚಿತ್ರವನ್ನ ಸ್ಟುಡಿಯೋ 18 ಬ್ಯಾನರ್ ಅಡಿಯಲ್ಲಿ ‘ಪಾಪ್ ಕಾರ್ನ್ ಮಂಕಿ ಟೈಗರ್’ ಖ್ಯಾತಿಯ ಸುಧೀರ್ ಕೆ.ಎಂ ನಿರ್ಮಾಣ ಮಾಡುತ್ತಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಮಾಸ್ ಕಥೆಯಾಗಿರೋ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಸುರೇಂದ್ರನಾಥ್ ಕಥೆ ಜೊತೆಗೆ ಸೂರಿಯವರೊಟ್ಟಿಗೆ ‘ಪಾಪ್ ಕಾರ್ನ್ ಮಂಕಿ ಟೈಗರ್’ ಟೀಮ್ ಕೆಲಸ ಮಾಡುತ್ತಿದೆ.








