ಕೊರೋನಾ ವೈರಸ್ ನಡುವೆಯೇ ನಮ್ಮ ಬದುಕು.. ಈ ಮಹಾಮಾರಿ ಸದ್ಯಕ್ಕಂತೂ ಕಳಚಿಕೊಳ್ಳುವುದಿಲ್ಲ. ಹೀಗಾಗಿ ಕೊರೋನಾ ವೈರಸ್ ಸೋಂಕಿನ ನಡುವೆಯೇ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಇದಕ್ಕೆ ಕ್ರಿಕೆಟ್ ಕೂಡ ಹೊರತಾಗಿಲ್ಲ. ಈಗಾಗಲೇ ಪ್ರೇಕ್ಷಕರಿಲ್ಲದೆ, ಸಾಮಾಜಿಕ ಅಂತರ, ಕ್ವಾರಂಟೈನ್ ಹೀಗೆ ನಾನಾ ಮಾರ್ಗಸೂಚಿಗಳನ್ನು ಪರಿಪಾಲಿಸಿಕೊಂಡು ಕ್ರಿಕೆಟ್ ಟೂರ್ನಿಗಳನ್ನು ಸಂಘಟಿಸುವ ಬಗ್ಗೆ ಪ್ಲಾನ್‍ಗಳು ನಡೆಯುತ್ತಿವೆ. ಇನ್ನೊಂದೆಡೆ ಐಪಿಎಲ್ ಮತ್ತು ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ಭವಿಷ್ಯ ಮೇ 28ರ ಐಸಿಸಿ ಸಭೆಯಲ್ಲಿ ನಿರ್ಧಾರವಾಗಲಿದೆ.
ಈ ನಡುವೆ ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ವಿರುದ್ಧದ ಟೆಸ್ಟ್ ಸರಣಿಯ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಈ ಬಗ್ಗೆ ಮೇ 29ರಂದು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಕ್ರಿಕೆಟ್ ಆಸ್ಟ್ರೇಲಿಯಾ ನಿಗದಿಪಡಿಸಿದಂತೆ ಬ್ರಿಸ್ಬೇನ್ ನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಡಿಸೆಂಬರ್ 11ರಿಂದ ಅಡಿಲೇಡ್ ನಲ್ಲಿ ಎರಡನೇ ಟೆಸ್ಟ್ ಪಂದದ್ಯ ನಡೆಯಲಿದೆ. ಇನ್ನುಳಿದಂತೆ ಮೆಲ್ಬರ್ನ್ ಮತ್ತು ಸಿಡ್ನಿಯಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ನಡೆಯಲಿವೆ. ಡಿಸೆಂಬರ್ 26ರಿಂದ ಮೂರನೇ ಟೆಸ್ಟ್ ಪಂದ್ಯ ಮೆಲ್ಬರ್ನ್ ನಲ್ಲಿ ಹಾಗೂ 2021 ಜನವರಿ 3ರಿಂದ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದೆ. ವಿಶೇಷ ಅಂದ್ರೆ ಎರಡನೇ ಟೆಸ್ಟ್ ಪಂದ್ಯ ಹೊನಲುಬೆಳಕಿನಡಿಯಲ್ಲಿ ನಡೆಯಲಿದೆ.
ಇದಕ್ಕು ಮೊದಲು ನವೆಂಬರ್ 23ರಿಂದ ಆಸ್ಟ್ರೇಲಿಯಾ ಮತ್ತು ಅಫಘಾನಿಸ್ತಾನ ತಂಡಗಳು ಪಿಂಕ್ ಬಾಲ್ ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಆ ನಂತರ ಭಾರತ ವಿರುದ್ಧದ ಟೆಸ್ಟ್ ಸರಣಿ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ಇನ್ನು ವಿದೇಶಿ ನೆಲದಲ್ಲಿ ಭಾರತ ಮೊದಲ ಬಾರಿ ಹೊನಲು ಬೆಳಕಿನಡಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿದೆ. ಈಗಾಗಲೇ ತವರಿನಲ್ಲಿ ಭಾರತ ಬಾಂಗ್ಲಾ ವಿರುದ್ಧ ಕೊಲ್ಕತ್ತಾದಲ್ಲಿ ಆಡಿತ್ತು. ಈ ಪಂದ್ಯವನ್ನು ಭಾರತ ಗೆಲುವು ಸಾಧಿಸಿತ್ತು.








