ಮಂಗಳೂರು, ಮೇ 28 : ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ.. ಮನಸೊಂದಿದ್ದರೆ ಮಾರ್ಗವು ಉಂಟು ಕೆಚ್ಚೆದೆ ಇರಬೇಕೆಂದು ಕೆಚ್ಚೆದೆ ಇರಬೇಕೆಂದೆಂದು… ಡಾ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಲನಚಿತ್ರದ ಹಾಡಿನ ಈ ಸಾಲನ್ನು ಮಂಗಳೂರಿನ ನಾಗುರಿಯ ಯುವಕರ ತಂಡ ನಿಜ ಮಾಡಿ ತೋರಿಸಿದೆ. ಲಾಕ್ ಡೌನ್ ನಿಂದಾಗಿ ವ್ಯಾಪಾರ ವಹಿವಾಟುಗಳು ಮುಚ್ಚಿ ಜಾಗತಿಕ ಅರ್ಥಿಕತೆಯೇ ಪಾತಾಳಕ್ಕೆ ಇಳಿದು ಜನರು ಕಂಗಾಲಾಗಿರುವ ಈ ಸಮಯದಲ್ಲಿ ಮಂಗಳೂರಿನ ಯುವಕರು ಮನಸೊಂದಿದ್ದರೆ ಮಾರ್ಗವು ಉಂಟು ಎಂದು ಸಾಧಿಸಿ ತೋರಿಸಿದ್ದಾರೆ. ಪ್ರಧಾನಿ ಮೋದಿಯವರ ಮಾತು ಯುವಕರ ಈ ಸಾಧನೆಗೆ ಪ್ರೇರಣೆಯಂತೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲಾಕ್ ಡೌನ್ 3ನೇ ಅವಧಿ ಕೊನೆಗೊಂಡ ಸಂದರ್ಭದಲ್ಲಿ ಆತ್ಮನಿರ್ಬರದ ಅರಿವು ಮೂಡಿಸಿದ್ದರು. ಸ್ವಾವಲಂಬಿ ಭಾರತದ ಪರಿಕಲ್ಪನೆಯನ್ನು ದೇಶದ ಜನರ ಮುಂದಿಟ್ಟಿದ್ದರು. ಭಾರತದ ಸ್ವದೇಶಿ ಉತ್ಪನ್ನಗಳು ಗ್ಲೋಬಲ್ ಮನ್ನಣೆ ಪಡೆಯಬೇಕು ಎಂದು ಹೇಳಿದ್ದರು.
ಪ್ರಧಾನಿ ಮೋದಿಯವರ ಈ ಮಾತಿನಿಂದ ಸ್ಪೂರ್ತಿ ಪಡೆದ ಮಂಗಳೂರಿನ ನಾಗುರಿಯ ನಾಲ್ಕು ಮಂದಿ ಯುವಕರ ತಂಡ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಉಪಕರಣವನ್ನು ಆವಿಷ್ಕಾರ ಮಾಡಿದೆ.
ತಂತ್ರಜ್ಞಾನದ ಬಳಕೆ, ಪ್ರಯೋಗಗಳ ನಿಪುಣತೆ ಹೊಂದಿದ್ದರೂ ದೊಡ್ಡ ಪ್ರಯತ್ನಕ್ಕೆ ಕೈಹಾಕದೆ ಚಿಕ್ಕ ಪುಟ್ಟ ಕೆಲಸವನ್ನು ಮಾಡುತ್ತಿದ್ದ ಮಂಗಳೂರಿನ ಯುವಕರಿಗೆ ಪ್ರಧಾನಿ ಮೋದಿಯವರ ಮಾತು ಜೀವನದ ದಿಕ್ಕನ್ನು ಬದಲಿಸಿದೆ. ಕೊರೋನಾ ವೈರಸ್ ಸೋಂಕಿನ ಈ ಸಮಯದಲ್ಲಿ ಸ್ಯಾನಿಟೈಸರ್ ಬಳಕೆ ಅತ್ಯಗತ್ಯ. ಇತರ ಮುಂಜಾಗ್ರತಾ ಕ್ರಮಗಳ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಆಗಾಗ ಸ್ಯಾನಿಟೈಸರ್ ಬಳಸಿ ಕೈ ತೊಳೆಯಬೇಕಾದದ್ದು ಅನಿವಾರ್ಯ ಕೂಡ. ಆದರೆ ಒಬ್ಬರು ಮುಟ್ಟಿದ ಸ್ಯಾನಿಟೈಸರ್
ಇನ್ನೊಬ್ಬರು ಮುಟ್ಟುವ ಕಾರಣಕ್ಕೆ ಸೋಂಕು ಹರಡುವ ಸಂಭವವಿರುತ್ತದೆ.ಈ ನಿಟ್ಟಿನಲ್ಲಿ ಮಂಗಳೂರಿನ ನಾಗುರಿಯ ನಿತಿನ್, ನಿಲೇಶ್, ರಾಜೇಶ್, ಜೀತೇಶ್ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಉಪಕರಣವನ್ನು ಆವಿಷ್ಕಾರ ಮಾಡಿದ್ದಾರೆ. ಈಗಾಗಲೇ ಹಲವು ಬಗೆಯ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಮಾರುಕಟ್ಟೆಯಲ್ಲಿದ್ದರೂ, ಈ ಯುವಕರ ತಂಡ ವಿಶಿಷ್ಟವಾದ ರೀತಿಯಲ್ಲಿ ಹ್ಯಾಂಡ್ ಫ್ರೀ ಸ್ಯಾನಿಟೈಸರ್ ಅನ್ನು ಆವಿಷ್ಕಾರ ಮಾಡಿದ್ದಾರೆ. ಯುಪಿವಿಸಿ ಪೈಪ್ ಬಳಸಿ ಮಾಡಲಾಗಿರುವ ಈ ಉಪಕರಣಕ್ಕೆ ಸ್ಯಾನಿ ಸ್ಟ್ಯಾಂಡ್ ಎಂದು ಹೆಸರನ್ನು ಇಟ್ಟಿದ್ದಾರೆ. ಸ್ಥಳಿಯವಾಗಿ ಸಿಗುವ ವಸ್ತುಗಳನ್ನು ಇದರ ತಯಾರಿಕೆಗಾಗಿ ಬಳಸಿದ್ದು, ಹ್ಯಾಂಡ್ ಫ್ರೀ ಸ್ಯಾನಿಟೈಸರ್ ನ ಉಪಕರಣವನ್ನು ಕಾಲಿನಿಂದ ಒತ್ತಿದಾಗ ಮಿತವಾಗಿ ಲಿಕ್ವಿಡ್ ಹೊರಬರುತ್ತದೆ. ಯಾವುದೇ ವಿದ್ಯುತ್, ಬ್ಯಾಟರಿಯ ಸಹಾಯವಿಲ್ಲದೇ ಈ ಉಪಕರಣವನ್ನು ಬಳಸಬಹುದಾಗಿದ್ದು, ಬಳಸುವ ವಿಧಾನವು ಅತ್ಯಂತ ಸರಳವಾಗಿದೆ. ಈ ಉಪಕರಣಕ್ಕೆ ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಿಂದ ಭಾರೀ ಬೇಡಿಕೆ ಬಂದ ಹಿನ್ನಲೆಯಲ್ಲಿ ಈ ನಾಲ್ಕು ಮಂದಿ ಯುವಕರ ತಂಡ ‘ಪವರ್ 9 ಗ್ಯಾಜೆಟ್’ ಎಂಬ ಕಂಪೆನಿಯನ್ನೂ ಪ್ರಾರಂಭಿಸಿದ್ದು, ಕಾರ್ಯಚರಣೆಯನ್ನು ಪ್ರಾರಂಭಿಸಿದ್ದಾರೆ.
ಕೊರೋನಾದಿಂದ ಅರ್ಥಿಕ ಬಿಕ್ಕಟ್ಟು ತಲೆದೋರಿರುವ ಈ ಸಂದರ್ಭದಲ್ಲಿ, ಸ್ವಾವಲಂಬಿ ಭಾರತ ನಿರ್ಮಿಸೋಣ ಎಂದು ಜನನಾಯಕ ಪ್ರಧಾನಿ ಮೋದಿಯವರು ಕೊಟ್ಟಿರುವ ಕರೆಗೆ ಓಗೊಟ್ಟು ಕೈಜೋಡಿಸಿದ ಈ ಯುವಕರು ಎಲ್ಲರಿಗೂ ಮಾದರಿ.








