ಮೈಸೂರು, ಮೇ 28: ಚೀನಾ ಭಾರತದಲ್ಲಿರುವ ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಮುಂದಾಗಿದೆ. ಹಾಗಾಗಿ ಮೈಸೂರು ವಿವಿ ಅವರಿಗೆ ಹತ್ತು ದಿನ ಮುಂಚಿತವಾಗಿ ಪರೀಕ್ಷೆ ನಡೆಸುತ್ತಿದೆ.
ಚೀನಾದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾನಿಲಯದ ಎಂ.ಎಸ್ಸಿ ಮಾಹಿತಿ ತಂತ್ರಜ್ಞಾನ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದು, ಪೂರ್ವ ನಿಗದಿಯಂತೆ ಜೂನ್ 15 ರಂದು ಪರೀಕ್ಷೆ ನಡೆಸಲು ವಿವಿಯು ಸಿದ್ಧತೆ ನಡೆಸಿತ್ತು. ಆದರೆ ಚೀನಾ ಸರ್ಕಾರವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ತೀರ್ಮಾನಿಸಿದ ಹಿನ್ನಲೆಯಲ್ಲಿ ಹತ್ತು ದಿನ ಮುಂಚಿತವಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.
ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕಳುಹಿಸುವಂತೆ ಚೀನಾ ರಾಯಭಾರ ಕಚೇರಿಯಿಂದ ದೂರವಾಣಿ ಕರೆ ಮಾಡಿ ಕೋರಲಾಗಿದೆ.
ಮೈಸೂರು ವಿವಿ ಕುಲಪತಿ ಪೊ.ಜಿ. ಹೇಮಂತಕುಮಾರ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ನಾವು ಜೂನ್ 15ರಂದು ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು ಈ ಬಗ್ಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದೆವು. ಆದರೆ ಅವರು 10 ದಿನ ಮೊದಲೇ ಪರೀಕ್ಷೆ ನಡೆಸುವಂತೆ ಮನವಿ ಮಾಡಿದರು. ಹಾಗಾಗಿ ನಾವು ಈ ಬಗ್ಗೆ ಚರ್ಚೆ ನಡೆಸಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ 10 ದಿನ ಮುಂಚಿತವಾಗಿ ಪರೀಕ್ಷೆ ನಡೆಸಲು ತೀರ್ಮಾನಿಸಿದೆವು ಎಂದು ಹೇಳಿದ್ದಾರೆ.
ಮಾಹಿತಿ ತಂತ್ರಜ್ಞಾನ ವಿಭಾಗದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಜೂನ್ 1 ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಜೂ 6ಕ್ಕೆ ಪರೀಕ್ಷೆ ಕೊನೆಗೊಳ್ಳಲಿದೆ. ಜೂನ್ 7 ಮತ್ತು 8 ರಂದು ಚೀನೀ ವಿದ್ಯಾರ್ಥಿಗಳು ಮೈಸೂರಿನಿಂದ ಸ್ವದೇಶಕ್ಕೆ ಹಿಂದಿರುಗುವರು ಎಂದು ವಿವಿ ತಿಳಿಸಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಚೀನಾ ತನ್ನ ನಾಗರಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಬಯಸಿದ್ದು, ಭಾರತ- ಚೀನಾ ನಡುವಿನ ಗಡಿಯಲ್ಲಿ ಉದ್ಭವಿಸಿರುವ ಸಮಸ್ಯೆಗೂ ಚೀನಿಯರನ್ನು ಭಾರತದಿಂದ ಸ್ಥಳಾಂತರಿಸುತ್ತಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಚೀನಾ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಆದರೆ ಭಾರತ – ಚೀನಾ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿದ ಮೇಲೆ ಭಾರತದಲ್ಲಿ ನೆಲೆಸಿರುವ ತನ್ನ ನಾಗರೀಕರಿಗೆ ಸ್ವದೇಶಕ್ಕೆ ಹಿಂದಿರುಗುವಂತೆಯೂ ಮತ್ತು ಅದಕ್ಕಾಗಿ ವಿಶೇಷ ವಿಮಾನ ವ್ಯವಸ್ಥೆ ಇದೆ ಎಂದು ವೆಬ್ ಸೈಟ್‌ನಲ್ಲಿ ನೋಟಿಸ್ ಪ್ರಕಟಿಸಿರುವುದು ಅನುಮಾನ ಮೂಡಿಸಿದೆ.








