ಮದುವೆಗೆ ತೆರಳಲು ಯೋಧನಿಗಾಗಿ ಬಿಎಸ್‌ಎಫ್ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ
ಶ್ರೀನಗರ: ಯೋಧ ತನ್ನ ಮದುವೆಗೆ ತೆರಳಲು ಯೋಧನಿಗಾಗಿ ಬಿಎಸ್‌ಎಫ್ ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.
ಯೋಧ ನಾರಾಯಣ ಬೆಹೆರಾ(30) ಅವರನ್ನು ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ರಿಮೋಟ್ ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಈ ಯೋಧ ಒಡಿಶಾದಲ್ಲಿರುವ ತಮ್ಮ ಮನೆಗೆ ತಲುಪಲು ಗಡಿ ಭದ್ರತಾ ಪಡೆ (BSF) ವಿಶೇಷ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.
ಯೋಧನ ವಿವಾಹವು ಮೇ 2 ರಂದು ನಡೆಯಲಿದೆ. ಆದರೆ, ಎಲ್‌ಒಸಿ ಹಿಮದಿಂದ ಆವೃತವಾಗಿರುವುದರಿಂದ ರಸ್ತೆ ಸಂಪರ್ಕ ದುಸ್ತರವಾಗಿತ್ತು. ಅಲ್ಲದೇ, ಕಾಶ್ಮೀರ ಕಣಿವೆಯೊಂದಿಗಿನ ಅದರ ರಸ್ತೆ ಸಂಪರ್ಕ ಸದ್ಯ ಕಡಿತಗೊಂಡಿದೆ. ಹೀಗಾಗಿ ಯೋಧ ಸುಮಾರು 2,500 ಕಿ.ಮೀ ದೂರದಲ್ಲಿರುವ ತನ್ನ ಮನೆಯನ್ನು ತಲುಪುವುದು ಅಸಾಧ್ಯವಾಗಿತ್ತು.
ಈ ವಿಷಯವನ್ನು ಬಿಎಸ್‌ಎಫ್ ಇನ್ಸ್‌ಪೆಕ್ಟರ್ ಜನರಲ್ (ಕಾಶ್ಮೀರ ಗಡಿಭಾಗ) ರಾಜಾ ಬಾಬು ಸಿಂಗ್ ಅವರಿಗೆ ತಿಳಿಸಲಾಯಿತು. ರಾಜಾ ಬಾಬು ಸಿಂಗ್ ಅವರ ಸೂಚನೆಯ ಮೇರೆಗೆ ತಕ್ಷಣ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನೂ ಹೆಲಿಕಾಪ್ಟರ್ ಗುರುವಾರ ಮುಂಜಾನೆ ಬೆಹೆರಾ ಅವರನ್ನು ಶ್ರೀನಗರಕ್ಕೆ ಕರೆ ತಂದಿತು. ಇದೀಗ ಅವರು ಒಡಿಶಾದ ಧೆಂಕನಲ್ ಜಿಲ್ಲೆಯ ಆದಿಪುರ ಗ್ರಾಮದ ತಮ್ಮ ಮನೆಗೆ ತೆರಳುತ್ತಿದ್ದಾರೆ. ‘ಸೈನಿಕರ ಕಲ್ಯಾಣವು ನಮ್ಮ ಮೊದಲ ಆದ್ಯತೆ’ ಎಂದು ಅಧಿಕಾರಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.








