ಜಿಎಸ್‌ಟಿ ಸಂಗ್ರಹ: ಏಪ್ರಿಲ್ ತಿಂಗಳಲ್ಲಿ ದಾಖಲೆಯ 1.68 ಲಕ್ಷ ಕೋಟಿ ಆದಾಯ
ಜಿಎಸ್‌ಟಿ ಸಂಗ್ರಹದಲ್ಲಿ ಮತ್ತೊಮ್ಮೆ ಸರ್ಕಾರ ಹಳೆಯ ಎಲ್ಲಾ ದಾಖಲೆಗಳನ್ನು ಮುರಿದಿದೆ. ಹಣಕಾಸು ಸಚಿವಾಲಯ ಭಾನುವಾರ ಹಂಚಿಕೊಂಡ ಮಾಹಿತಿ ಪ್ರಕಾರ, ಏಪ್ರಿಲ್‌ನಲ್ಲಿ ಜಿಎಸ್‌ಟಿ ಆದಾಯವು ಸುಮಾರು 1.68 ಲಕ್ಷ ಕೋಟಿ ರೂಪಾಯಿಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಹಿಂದಿನ ಮಾರ್ಚ್‌ನಲ್ಲಿ ಜಿಎಸ್‌ಟಿ ಆದಾಯ 1.42 ಲಕ್ಷ ಕೋಟಿ ರೂ. ಮಾರ್ಚ್ ಗೆ ಹೋಲಿಸಿದರೆ ಏಪ್ರಿಲ್ ನಲ್ಲಿ 25 ಸಾವಿರ ಕೋಟಿ ಹೆಚ್ಚು ಆದಾಯ ಬಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಜಿಎಸ್‌ಟಿ ಆದಾಯದಲ್ಲಿ ಸುಧಾರಣೆಗೆ ಆರ್ಥಿಕ ಚಟುವಟಿಕೆಗಳ ಸುಧಾರಣೆಯೇ ಕಾರಣ ಎಂದು ಕೇಂದ್ರ ಹೇಳಿದೆ ಈ ವರ್ಷದ ಏಪ್ರಿಲ್‌ನ ಜಿಎಸ್‌ಟಿ ಆದಾಯವು ಕಳೆದ ವರ್ಷಕ್ಕಿಂತ ಶೇಕಡಾ 20 ರಷ್ಟು ಹೆಚ್ಚಾಗಿದೆ. ಏಪ್ರಿಲ್‌ನಲ್ಲಿ 1.06 ಕೋಟಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಒಟ್ಟು 1.68 ಲಕ್ಷ ಕೋಟಿ ಆದಾಯದಲ್ಲಿ ಸಿಜಿಎಸ್‌ಟಿ 33,159 ಕೋಟಿ, ಎಸ್‌ಜಿಎಸ್‌ಟಿ 41,793 ಕೋಟಿ, ಐಜಿಎಸ್‌ಟಿ 81,939 ಕೋಟಿ ಮತ್ತು ಸೆಸ್ 10,649 ಕೋಟಿ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಜಿಎಸ್‌ಟಿ ಜಾರಿಯಾದ ನಂತರದಿಂದ ಒಂದೇ ತಿಂಗಳಲ್ಲಿ ಜಿಎಸ್‌ಟಿ ಸಂಗ್ರಹ 1.50 ಲಕ್ಷ ಕೋಟಿ ದಾಟಿರುವುದು ಇದೇ ಮೊದಲು.








