ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆಗೆ ಮುಂದಾಗಿ ಬಂಧನಕ್ಕೊಳಗಾಗಿದ್ದ ಜಿರಳೆ ಜನತಾ ಪಕ್ಷದ ಸಿಜೆಪಿ ನಾಯಕರಾದ ಅಭಿಜೀತ್ ದೀಪ್ಕೆ, ಅಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಆದರೆ ಈ ಬಿಡುಗಡೆ ಅಷ್ಟು ಸುಲಭವಾಗಿಲ್ಲ. ದೆಹಲಿಯ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಇವರಿಗೆ ಅತ್ಯಂತ ಕಠಿಣ ಷರತ್ತುಗಳನ್ನು ವಿಧಿಸಿದ್ದು, ಒಂದು ವರ್ಷದವರೆಗೆ ಇವರ ಪ್ರತಿಭಟನೆಯ ಹಾದಿಗೆ ದೊಡ್ಡ ತಡೆಗೋಡೆ ನಿರ್ಮಾಣವಾಗಿದೆ.
ಏನಿದು ಒಂದು ವರ್ಷದ ಶಾಂತಿ ಬಾಂಡ್
ಬಿಡುಗಡೆಯ ಸಂದರ್ಭದಲ್ಲಿ ಮೂವರು ನಾಯಕರು ವಿಶೇಷ ಬಾಂಡ್‌ಗೆ ಸಹಿ ಹಾಕಿದ್ದಾರೆ. ಈ ಬಾಂಡ್ ಪ್ರಕಾರ, ಮುಂದಿನ ಒಂದು ವರ್ಷದವರೆಗೆ ಅವರು ಸಾರ್ವಜನಿಕ ಶಾಂತಿಗೆ ಭಂಗ ತರುವ ಯಾವುದೇ ಚಟುವಟಿಕೆಯಲ್ಲಿ ತೊಡಗುವಂತಿಲ್ಲ. ಒಂದು ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಅಥವಾ ಶಾಂತಿ ಕದಡುವ ಕೆಲಸ ಮಾಡಿದರೆ ಅವರಿಗೆ ಮತ್ತೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ. ಅಷ್ಟೇ ಅಲ್ಲದೆ, ಪ್ರತಿಭಟನೆಗಳ ಕೇಂದ್ರ ಬಿಂದು ಎನಿಸಿರುವ ದೆಹಲಿಯ ಜಂತರ್ ಮಂತರ್‌ಗೆ ಇವರು ಭೇಟಿ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಬಂಧನಕ್ಕೆ ಕಾರಣವಾದ ಆ ಸೆಕ್ಷನ್ ಗಳ ಹಿಂದಿನ ರಹಸ್ಯವೇನು
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಇವರು ಯೋಜಿಸಿದ್ದರು. ಆದರೆ ಅನುಮತಿ ಇಲ್ಲದ ಕಾರಣ ಪೊಲೀಸರು ಇವರನ್ನು ವಿಮಾನದಿಂದ ಇಳಿಯುವ ಮೊದಲೇ ವಾರಂಟ್ ಇಲ್ಲದೆ ಬಂಧಿಸಿದ್ದರು. ಇದಕ್ಕಾಗಿ ಬಳಸಿದ್ದು ಹೊಸ ಭಾರತೀಯ ನಾಗರಿಕ ರಕ್ಷಣಾ ಸಂಹಿತೆಯ ಬಿಎನ್‌ಎಸ್ ಸೆಕ್ಷನ್ 126 ಮತ್ತು 170. ಒಬ್ಬ ವ್ಯಕ್ತಿ ಸಮಾಜದಲ್ಲಿ ಗಂಭೀರ ಅಪರಾಧ ಎಸಗಬಹುದು ಅಥವಾ ಶಾಂತಿ ಕದಡಬಹುದು ಎಂದು ಪೊಲೀಸರಿಗೆ ಬಲವಾದ ಶಂಕೆ ಇದ್ದರೆ, ಈ ಕಾಯ್ದೆಯಡಿ ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರ ಪೊಲೀಸರಿಗಿದೆ.
ಅಲಹಾಬಾದ್ ಹೈಕೋರ್ಟ್‌ನ ಹಿರಿಯ ವಕೀಲರ ಪ್ರಕಾರ, ಈ ಬಾಂಡ್ ಎನ್ನುವುದು ಒಂದು ಗ್ಯಾರಂಟಿ ಇದ್ದಂತೆ. ಒಂದು ವರ್ಷದ ಒಳಗೆ ಈ ನಾಯಕರು ಎಲ್ಲಾದರೂ ನಿಂದನೀಯ ಭಾಷೆ ಬಳಸಿ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ಶಾಂತಿ ಭಂಗ ಉಂಟುಮಾಡಿದರೆ, ಅವರು ಬಾಂಡ್ ರೂಪದಲ್ಲಿ ಇಟ್ಟಿರುವ ಮೊತ್ತವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಅದರ ಜೊತೆಗೆ ಪೊಲೀಸರು ಅವರನ್ನು ಕೂಡಲೇ ಬಂಧಿಸಿ ಜೈಲಿಗೆ ಕಳುಹಿಸುತ್ತಾರೆ.
ಪ್ರತಿಭಟನೆ ಮಾಡುವ ಹಕ್ಕೇ ಇಲ್ಲವೇ
ಈ ಬಾಂಡ್ ಗೆ ಸಹಿ ಹಾಕಿದ ತಕ್ಷಣ ಪ್ರತಿಭಟನೆ ಮಾಡುವ ಹಕ್ಕೇ ಇಲ್ಲ ಎಂದರ್ಥವಲ್ಲ. ಅವರು ಶಾಂತಿಯುತವಾಗಿ ಪ್ರತಿಭಟಿಸಬಹುದು, ಆದರೆ ಅದಕ್ಕೆ ಜಿಲ್ಲಾಡಳಿತದ ಪೂರ್ವಾನುಮತಿ ಕಡ್ಡಾಯ. ಪ್ರಚೋದನಕಾರಿ ಭಾಷಣ ಅಥವಾ ರಸ್ತೆ ತಡೆ ನಡೆಸುವಂತಿಲ್ಲ. ಕಾನೂನಿನ ಚೌಕಟ್ಟಿನ ಒಳಗೆ ಮಾತ್ರ ಇವರ ಹೋರಾಟ ಸೀಮಿತವಾಗಿರಬೇಕು. ಒಟ್ಟಿನಲ್ಲಿ ದೆಹಲಿ ಪೊಲೀಸರು ಮತ್ತು ಕೋರ್ಟ್ ವಿಧಿಸಿರುವ ಈ ಷರತ್ತುಗಳು ಸಿಜೆಪಿ ನಾಯಕರ ಕೈಗಳನ್ನು ಒಂದು ವರ್ಷದವರೆಗೆ ಕಟ್ಟಿಹಾಕಿದಂತಿದೆ.








