ಪ್ರೇಯಸಿಯ ಸಹೋದರನನ್ನು ಕೊಂದ ಪ್ರಿಯಕರ
ಲಕ್ನೋ: ಪ್ರಿಯಕರ, ಪ್ರೇಯಸಿ ಮನೆಗೆ ನುಗ್ಗಿ, ಪ್ರೇಯಸಿ, ಪ್ರೇಯಸಿ ತಾಯಿ ಮೇಲೆ ಹಲ್ಲೆ ಮಾಡಿ, ಪ್ರೇಯಸಿಯ ಸಹೋದರನನ್ನ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಪಿಲಿಭಿತ್‍ನಲ್ಲಿ ನಡೆದಿದೆ.
ಸಿರ್ಸಾ ಗ್ರಾಮದ ಮಾಯಾದೇವಿ(50), ರಚನಾ ಗಂಗ್ವಾರ್ (22) ಹಲ್ಲೆಗೊಳಗಾದ ದುರ್ದೈವಿಗಳು. ರಚನಾ ಸಹೋದರ ರವೀಂದ್ರಪಾಲ್(28) ಕೊಲೆಯಾದ ದುರ್ದೈವಿ. 19 ವರ್ಷದ ರಿಂಕು ಗಂಗ್ವಾರ್ ಕೊಲೆ ಮಾಡಿ, ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಡೆದಿದ್ದೇನು? : ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಪ್ರಭು ಈ ಕುರಿತು ಮಾಹಿತಿ ಕೊಟ್ಟಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಇದೊಂದು ಪ್ರೇಮ ಸಂಬಂಧ ವಿಫಲವಾದ ಹಿನ್ನೆಲೆ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಆರೋಪಿ ರಿಂಕು ಗಂಗ್ವಾರ್ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನಿವಾಸಿಯಾಗಿದ್ದು, ರಚನಾ ಗಂಗ್ವಾರ್ ನನ್ನು ಪ್ರೀತಿಸುತ್ತಿದ್ದ. ಆದರೆ ಆಕೆಯ ಪೋಷಕರು ಬೇರೊಬ್ಬನ ಜೊತೆ ವಿವಾಹವನ್ನು ನಿಶ್ಚಯಿಸಿದ್ದರು. ಇದನ್ನು ತಿಳಿದು ಕೋಪಕೊಂಡ ರಿಂಕು, ರಚನಾ ಮನೆಗೆ ಬೆಳಗ್ಗೆ ನುಗ್ಗಿ ಆಕೆ ಹಾಗೂ ಆಕೆಯ ತಾಯಿ ಮಾಯಾದೇವಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.
ರಚನಾ ಸಹೋದರ ರವೀಂದ್ರಪಾಲ್ ಮಧ್ಯಪ್ರವೇಶಿಸಿದಾಗ, ರಿಂಕು ಅವನನ್ನು ಗುಂಡಿಕ್ಕಿ ಕೊಂದಿದ್ದಾನೆ. ನಂತರ ಅವನು ಅಲ್ಲಿಂದ ಓಡಿಹೋಗಿ ಸುಮಾರು 20 ಮೀಟರ್ ದೂರದಲ್ಲಿ ತನ್ನ ಮೇಲೆ ಗುಂಡು ಹಾರಿಸಿಕೊಂಡಿದ್ದಾನೆ. ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.








