IPL 2022 : CSKಗೆ ಶಾಕ್, ಟೂರ್ನಿಯಿಂದ ಜಡೇಜಾ ಔಟ್..!
15ನೇ ಸೀಸನ್ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ನೀರಸ ಪ್ರದರ್ಶನ ನೀಡಿದೆ.
ಈಗಾಗಲೇ ಟೂರ್ನಿಯಿಂದ ಒಂದು ಕಾಲು ಹೊರಗಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.
ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹೊರ ಬಿದ್ದಿದ್ದಾರೆ.
ಗಾಯದ ಸಮಸ್ಯೆಯಿಂದಾಗಿ ಚೆನ್ನೈ ತಂಡದಿಂದ ಜಡೇಜಾ ಹೊರನಡೆದಿದ್ದಾರೆ ಎಂದು ವರದಿಯಾಗಿದೆ.
ಸಾಂಪ್ರದಾಯಿಕ ಎದುರಾಳಿ ಮುಂಬೈ ಇಂಡಿಯನ್ಸ್ ಎದುರಿನ ಮಹತ್ವದ ಪಂದ್ಯಕ್ಕೂ ಮುನ್ನವೇ ರವೀಂದ್ರ ಜಡೇಜಾ, ಐಪಿಎಲ್ ಟೂರ್ನಿಯಿಂದ ಹೊರಬಿದ್ದಿರುವುದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ರವೀಂದ್ರ ಜಡೇಜಾ ಮೇ ನಾಲ್ಕರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದರು.

ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ಸಂದರ್ಭದಲ್ಲಿ ಡೈವ್ ಹೊಡೆದು ಜಡೇಜಾ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದರು.
ಇದೇ ಕಾರಣಕ್ಕೆ ಜಡೇಜಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.
ಈಗ ಗಾಯ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಡೇಜಾಗೆ ವಿಶ್ರಾಂತಿ ಅತ್ಯವಶ್ಯಕ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ರವೀಂದ್ರ ಜಡೇಜಾ ಟೂರ್ನಿಯಿಂದ ಹೊರ ನಡೆದಿದ್ದಾರೆ.
ಅಂದಹಾಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ 15ನೇ ಆವೃತ್ತಿಯ ಐಪಿಎಲ್ನಲ್ಲಿ ಯಾವುದೂ ಅಂದುಕೊಂಡಂತೆ ನಡೆಯುತ್ತಿಲ್ಲ.
ಮೊದಲಿಗೆ ರವೀಂದ್ರ ಜಡೇಜಾ ನಾಯಕನಾಗಿ ಯಶಸ್ಸು ಕಾಣಲಿಲ್ಲ. ಬಳಿಕ ಮಹೇಂದ್ರ ಸಿಂಗ್ ಧೋನಿ ಕೈಗೆ ನಾಯಕತ್ವ ಮರಳಿದರೂ ಗೆಲುವಿನ ಸ್ಥಿರತೆ ಕಂಡುಕೊಳ್ಳಲಿಲ್ಲ.
ಇಲ್ಲಿ ತನಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು 11 ಪಂದ್ಯಗಳನ್ನಾಡಿ 4 ಗೆಲುವು ಹಾಗೂ 7 ಸೋಲುಗಳೊಂದಿಗೆ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
ಮೊದಲ ಎಂಟು ಪಂದ್ಯಗಳಿಗೆ ರವೀಂದ್ರ ಜಡೇಜಾ ನಾಯಕರಾಗಿದ್ದರು. ಈ ವೇಳೆ ಚೆನ್ನೈ ತಂಡ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಗೆಲುವು ದಾಖಲಿಸಿತ್ತು.
ಹೀಗಾಗಿ ಸ್ವತಃ ರವೀಂದ್ರ ಜಡೇಜಾ ಅವರೇ ನಾಯಕತ್ವದಿಂದ ಕೆಳಗಿಳಿದರು. ಬಳಿಕ ಮತ್ತೆ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸಾರಥ್ಯವಹಿಸಿಕೊಂಡರು.
ಚೆನ್ನೈ ಸೂಪರ್ ಕಿಂಗ್ಸ್ ಲೀಗ್ನಲ್ಲಿ ಇನ್ನು ಮೂರು ಪಂದ್ಯಗಳನ್ನು ಆಡಬೇಕಿದೆ. ಲೀಗ್ ಹಂತದಲ್ಲಿ ಚೆನ್ನೈ ತಂಡ, ಮುಂಬೈ ಇಂಡಿಯನ್ಸ್, ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯಗಳನ್ನು ಆಡಬೇಕಿದೆ.








