ಸರ್ಕಾರ ಪತನಕ್ಕೆ ಸಿದ್ದವಾಯಿತಾ ರೆಬೆಲ್ ಟೀಂ ? ಸರ್ಕಾರ ಪರ ಯಾರು ? ವಿರುದ್ಧ ಯಾರು.
ಬೆಂಗಳೂರು : ರಾಜ್ಯ ಸರ್ಕಾರದ ವಿರುದ್ದ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಪ್ರೇರಣೆ ನೀಡುವಂತೆ ಶಾಸಕ ಉಮೇಶ್ ಕತ್ತಿ ಅವರ ನಿವಾಸದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ, ಬಸವರಾಜ ಮತ್ತಿಮೂಡ, ಶಿವರಾಜ್ ಪಾಟೀಲ, ಮಹಾದೇವಪ್ಪ ಯಾದವಾಡ, ಬಾಲಚಂದ್ರ ಜಾರಕೀಹೊಳಿ, ಪರಣ್ಣ ಮುನವಳ್ಳಿ, ರಾಜಕುಮಾರ್ ಪಾಟೀಲ್, ಸುಭಾಷ್ ಗುತ್ತೇದಾರ್ ಸೋಮಲಿಂಗಪ್ಪ, ರಾಜುಗೌಡ, ಗೂಳಿಹಟ್ಟಿ ಶೇಖರ್, ಸಿದ್ದು ಸವದಿ ಸೇರಿದಂತೆ 20 ಕ್ಕೂ ಹೆಚ್ಚು ಶಾಸಕರು ಸೇರಿ ಚರ್ಚೆ ನಡೆಸಿದ್ದಾರೆ.
ಅಲ್ಲದೆ ಸಭೆಯ ಬಳಿಕ ರೆಬೆಲ್ ಶಾಸಕರು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಲು ಪ್ರಯತ್ನಸಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ರೆಬೆಲ್ ಮಿಟಿಂಗ್ ಅನ್ನು ರಮೇಶ್ ಜಾರಕೀಹೊಳಿ ಸಮರ್ಥಿಸಿಕೊಂಡಿದ್ದಾರೆ. ಈ ವಿಚಾರವಾಗಿ ಮೈಸೂರಿನಲ್ಲಿ ಮಾತನಾಡಿದ ಅವರು ಊಟಕ್ಕೆ ಸೇರುವುದರಲ್ಲಿ ಯಾವುದೇ ತಪ್ಪಿಲ್ಲ. ನಮ್ಮ ಭಾಗದ ಶಾಸಕರು ಔತಣಕೂಟ ಸೇರಿದ್ದಾರೆ ಅಷ್ಟೇ, ಉಮೇಶ್ ಕತ್ತಿ ನನ್ನ ಸ್ನೇಹಿತ ಅವರು ಸರ್ಕಾರದ ವಿರುದ್ದ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಬೆಳಗಾವಿಯಲ್ಲಿ ಮಾತನಾಡಿದ ಸಂಸದ ಸುರೇಶ್ ಅಂಗಡಿ , ಉಮೇಶ್ ಕತ್ತಿ ಅವರಿಗೆ ಸರ್ಕಾರದ ಬಗ್ಗೆ ಭಿನ್ನಾಭಿಪ್ರಾಯಗಳು ಇದ್ದರೇ, ಯಡಿಯೂರಪ್ಪ ಅವರ ಜೊತೆ ಮಾತನಾಡಬೇಕು. ಹೊರಗಡೆ ಮಾತಾಡಿ ಗೊಂದಲು ಸೃಷ್ಠಿ ಮಾಡಬಾರದು. ಅಲ್ಲದೆ ರಾಜ್ಯಸಭಾ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷ ಯಾರಿಗೆ ಹೇಳುತ್ತದೆ ಅವರಿಗೆ ಮತ ಹಾಕುತ್ತೇನೆ ಎಂದು ಹೇಳಿದ್ದಾರೆ.
ಇದೆ ವೇಳೆ ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಬಹಿರಂಗವಾಗಿಯೇ ಸರ್ಕಾರದ ವಿರುದ್ದ ಅಸಮಾಧಾನ ಹೊರ ಹಾಕಿದ್ದಾರೆ. ಚಿತ್ರದುರ್ಗದಲ್ಲಿ ಮತನಾಡಿದ ಅವರು, ನಾನು ಸಹ ಸುದೀರ್ಘ ರಾಜಕಾರಣದಲ್ಲಿ ಇದ್ದೇನೆ. ರಾಜಕೀಯ ಅನುಭವ ಇದೆ. ಮೂರು ವರ್ಷ ಅಧಿಕಾರದಲ್ಲಿರುತ್ತೇವೆ ಎಂದು ಮನಸ್ಸಿಗೆ ಬಂದಂತೆ ಆಡಳಿತ ನಡೆಸಲಾಗುತ್ತಿದೆ. ಅವರಿಗೆ ಬೇಕಾದವರಿಗೆ ಮಂತ್ರಿ ಸ್ಥಾನಮಾನ ನೀಡುತ್ತಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ ಮಂತ್ರಿಮಂಡಲ ರಚನೆ ಮಾಡಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನೂ ಶಾಸಕ ಯತ್ನಾಳ್ ಅವರು ಯಡಿಯೂರಪ್ಪನವರ ವಿರುದ್ಧ ಬಹಿರಂಗವಾಗಿಯೇ ಬಂಡಾಯದ ಬಾವುಟ ಹಾರಿಸಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ನನ್ನ ನಾಯಕರಾಗಿದ್ದು, ಯಡಿಯೂರಪ್ಪನವರು ನನಗೆ ಮುಖ್ಯಮಂತ್ರಿಗಳಷ್ಟೇ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ನಾಯಕತ್ವ ಬದಲಾವಣೆಗೆ ಕೇಂದ್ರದ ವರಿಷ್ಠರು ಮುಂದಾದರೆ ಅದಕ್ಕೂ ಸೈ ಎನ್ನುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪನವರ ಬದಲಾವಣೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಬಿಜೆಪಿ ಹಿರಿಯ ನಾಯಕ ಹಾಗೂ ಸಚಿವ ಜಗದೀಶ್ ಶೆಟ್ಟರ್ ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಹುಬ್ಬಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರದಲ್ಲೊ ನೋ ಕಾಮೆಂಟ್ಸ್, ರಾಂಗ್ ಪರ್ಸನ್ ಬಳಿ ಪ್ರಶ್ನೆ ಕೇಳುತ್ತಿದ್ದೀರಾ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಸಚಿವ ಸಂಪುಟ ಪುನರ್ರಚನೆ, ರಾಜ್ಯಸಭಾ, ವಿಧಾನಪರಿಷತ್ ಚುನಾವಣೆ ಈ ಎಲ್ಲಾ ವಿಚಾರಗಳು ಬಿಜೆಪಿ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ.








