ರೆಬೆಲ್ ಸ್ಟಾರ್ ಅಂಬರೀಷ್ ಜನ್ಮದಿನದ ಅಂಗವಾಗಿ ಅಭಿಷೇಕ್ ನಟಿಸುತ್ತಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಫಸ್ಟ್ ಲುಕ್ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಫಸ್ಟ್ ಲುಕ್ ವಿಡಿಯೋದಲ್ಲಿ ‘ಯಂಗ್ ರೆಬೆಲ್ ಸ್ಟಾರ್’ ಎಂಬ ಬಿರುದಿನೊಂದಿಗೆ ಅಭಿಷೇಕ್ ಅಂಬರೀಷ್ ಅವರನ್ನು ಪರಿಚಯಿಸಲಾಗಿದೆ. ಗನ್ ಹಿಡಿದ ರಗಡ್ ಲುಕ್ನಲ್ಲಿ ಅಭಿಷೇಕ್, ‘ಅಂತ’ ಸಿನಿಮಾದ ಅಂಬರೀಷ್ ಅವರನ್ನು ನೆನಪಿಸುತ್ತಾರೆ.
ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಸುಕ್ಕಾ ಸೂರಿ ಆಕ್ಷನ್ ಕಟ್ ಹೇಳುತ್ತಿರೋದು ಸ್ಯಾಂಡಲ್ ವುಡ್ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಏಕೆಂದರೆ ಸೂರಿ ಪಕ್ಕಾ ಮಾಸ್ ಅಂಡ್ ರಾ ಚಿತ್ರಗಳಿಗೆ ಫುಲ್ ಫೇಮಸ್. ಅವರ ಚಿತ್ರಗಳಲ್ಲಿ ಪಾತ್ರಗಳು ವಿಭಿನ್ನವಾಗಿರುತ್ತವೆ. ಈ ಕಾರಣಕ್ಕಾಗಿ ಸೂರಿ ಚಿತ್ರದಲ್ಲಿ ಅಭಿಷೇಕ್ ಹೇಗೆ ಕಾಣಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಸೂರಿ ಮತ್ತು ಅಭಿಷೇಕ್ ಜೋಡಿ ‘ಬ್ಯಾಡ್ ಮ್ಯಾನರ್ಸ್’ ಚಿತ್ರ ಮಾಡುತ್ತಿರುವುದು ಇತ್ತೀಚೆಗೆ ಬಹಿರಂಗವಾಗಿತ್ತು. ಎರಡು ದಿನಗಳ ಹಿಂದೆ ಚಿತ್ರದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಕೈಯಲ್ಲಿ ಗನ್ ಹಿಡಿದ ಅಭಿಷೇಕ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದರು.
ಸದ್ಯ ರಿವೀಲ್ ಆಗಿರುವ ಅಭಿಷೇಕ್ ಅವರ ಎರಡು ಲುಕ್ ಗಳು ರಗಡ್ ಆಗಿದ್ದು, ‘ಯಂಗ್ ರೆಬೆಲ್’ ಎಂಬ ಬಿರುದಿಗೆ ಸೂಕ್ತವಾಗಿದೆ ಎಂಬುದನ್ನು ತೋರಿಸಿವೆ. ಇನ್ನು ಚರಣ್ ರಾಜ್ ಹಿನ್ನೆಲೆ ಸಂಗೀತ ಪರಿಪೂರ್ಣ ಆಕ್ಷನ್ ಚಿತ್ರದ ಫೀಲ್ ನೀಡುತ್ತದೆ.
ಅಭಿಷೇಕ್ ‘ಅಮರ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ನಾಗಶೇಖರ್ ನಿರ್ದೇಶನದ ಈ ಸಿನಿಮಾ ಅನೇಕ ನಿರೀಕ್ಷೆಗಳನ್ನು ಮೂಡಿಸಿದ್ದರೂ, ಯಶಸ್ಸು ಗಳಿಸುವಲ್ಲಿ ವಿಫಲವಾಗಿತ್ತು. ಮೊದಲ ಫಿಲಂನಲ್ಲಿ ಲವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಅಭಿ ಎರಡನೆಯ ಚಿತ್ರದಲ್ಲಿಯೇ ತಮ್ಮ ಲುಕ್ ಬದಲಿಸಿಕೊಳ್ಳುತ್ತಿದ್ದಾರೆ.







