ಮಹಿಳೆಯನ್ನು ಕೊಂದ ಪ್ರಕರಣದಲ್ಲಿ ಟಗರಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿರುವ ಘಟನೆ ದಕ್ಷಿಣ ಸುಡಾನ್ ನಲ್ಲಿ ನಡೆದಿದೆ..
ದಕ್ಷಿಣ ಸುಡಾನ್ ನಲ್ಲಿ 45 ವರ್ಷದ ಅಧಿಯು ಚಾಪಿಂಗ್ ಎಂಬವರ ಮೇಲೆ ಟಗರು ದಾಳಿ ನಡೆಸಿದೆ. ಪ್ರಕರಣ ಸಂಬಂಧ ರಾಮ್ ಹೆಸರಿನ ಟಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಟಗರು, ಚಾಪಿಂಗ್ ಅವರಿಗೆ ಗುದ್ದಿ ಗಂಭೀರವಾಗಿ ಗಾಯಗೊಳಿಸಿತ್ತು. ಟಗರಿನ ದಾಳಿಗೆ ಒಳಗಾಗಿದ್ದ ಮಹಿಳೆಯು ಈಗ ಮೃತಪಟ್ಟಿದ್ದಾರೆ.
ಟಗರನ್ನ ಬಂಧಿಸಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂದಿನ ಮೂರು ವರ್ಷಗಳ ಕಾಲ ಸುಡಾನ್ ನ ಲೇಕ್ಸ್ ಸ್ಟೇಟ್ ನಲ್ಲಿರುವ ಅಡ್ಯುಯೆಲ್ ಕೌಂಟಿಯ ಪ್ರಧಾನ ಕಚೇರಿಯ ಮಿಲಿಟರಿ ಶಿಬಿರದಲ್ಲಿ ಟಗರು ಸೆರೆವಾಸ ಅನುಭವಿಸಲಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಟಗರಿನ ಮಾಲೀಕ ಡುಯೋನಿ ಮಾನ್ಯಂಗ್ ಧಾಲ್, ಸಂತ್ರಸ್ತೆ ಕುಟುಂಬಕ್ಕೆ ತಮ್ಮ ಐದು ಹಸುಗಳನ್ನು ಪರಿಹಾರವಾಗಿ ನೀಡಬೇಕು ಎಂದು ಸಹ ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿದೆ.