ಬೆಂಗಳೂರು : ಪತ್ರಕರ್ತರಿಗೆ ನೀಡಲಾಗಿರುವ ಸರ್ಕಾರಿ ಪಿಂಚಣಿ, ಆರೋಗ್ಯ ವಿಮೆ, ರಿಯಾಯಿತಿ ದರದಲ್ಲಿ ಬಸ್ ಪಾಸ್ ಸವಲತ್ತುಗಳನ್ನು ಪತ್ರಿಕಾ ಸಿಬ್ಬಂದಿಗೂ ನೀಡಬೇಕು. ವಕೀಲ ವೃತ್ತಿ ಅವಲಂಬಿಸಿರುವವರಿಗೆ ಹಣಕಾಸಿನ ನೆರವು ನೀಡಬೇಕು. ಮಂಡ್ಯದ ಮೈಶುಗರ್ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈ ಮೂರು ವಿಚಾರಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪತ್ರದ ಬರೆದ ಡಿ.ಕೆ. ಶಿವಕುಮಾರ್, ರಾಜ್ಯದಲ್ಲಿ ಸುಮಾರು 1.05 ಲಕ್ಷ ವಕೀಲರಿದ್ದಾರೆ. ಅವರು ವಕೀಲ ವೃತ್ತಿಯನ್ನೇ ಅವಲಂಬಿಸಿ ಬದುಕುತ್ತಿದ್ದಾರೆ. ಕೊರೊನಾ ನಿರ್ವಹಣೆಗೆ ಸರ್ಕಾರ ಲಾಕ್ ಡೌನ್ ಹೇರಿಕೆ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯಗಳೂ ಕೂಡ ಬಂದ್ ಆಗಿದ್ದವು. ಆದ್ದರಿಂದ ಆರ್ಥಿಕವಾಗಿ ಸಮಸ್ಯೆ ಎದುರಾಗಿದೆ. ಹೀಗಾಗಿ ವಕೀಲ ವೃಂದದವರಿಗೆ ಸರ್ಕಾರ 25 ಕೋಟಿ ನೆರವು ನೀಡಬೇಕು.
ಇನ್ನೂ ಪತ್ರಕರ್ತರಿಗೆ ಸರ್ಕಾರಿ ಪಿಂಚಣಿ, ಆರೋಗ್ಯ ವಿಮೆ, ರಿಯಾಯಿತಿ ದರದಲ್ಲಿ ಬಸ್ ಪಾಸ್ ಸವಲತ್ತುಗಳನ್ನು ನೀಡಲಾಗುತ್ತದೆ. ಅದೇ ರೀತಿ ಇದೇ ವಿಭಾಗದಲ್ಲಿ ಕೆಲಸ ಮಾಡುವ ಪತ್ರಿಕಾ ಸಿಬ್ಬಂದಿಗೂ ನೀಡಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿಕೊಂಡಿದ್ದಾರೆ.
ಅಲ್ಲದೆ ಮೈ ಶುಗರ್ ಕಾರ್ಖಾನೆ ಕರ್ನಾಟಕದಲ್ಲೇ ಮೊದಲ ಹಾಗೂ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿದೆ. ಮಂಡ್ಯ ಜಿಲ್ಲೆ ರೈತರ ಹಾಗೂ ಜನರ ಬದುಕಿನ ಬೆನ್ನೆಲುಬಾಗಿದೆ. ರಾಜ್ಯದಲ್ಲಿ ಸಕ್ಕರೆ ಉತ್ಪಾದನೆಯಲ್ಲಿ ಈ ಕಾರ್ಖಾನೆ ಮುಂಚೂಣಿಯಲ್ಲಿದೆ. ಹೀಗಾಗಿ ಈ ಕಾರ್ಖಾನೆಯನ್ನು ಖಾಸಗೀಕರಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಬಿಟ್ಟು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.








