ಕಾಂಗ್ರೆಸ್ ಪ್ರತಿಭಟನೆ ಕುವೆಂಪು ವಿರುದ್ಧವೇ : BJP ಪ್ರಶ್ನೆ
ಬೆಂಗಳೂರು : ಮುಡಂಬಡಿತ್ತಾಯ ಸಮಿತಿ ಪರಿಷ್ಕರಿಸಿದ ಪಠ್ಯಗಳಲ್ಲಿ, ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ 8 ಪಾಠಗಳಿದ್ದವು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅದಕ್ಕೂ ಕತ್ತರಿ ಹಾಕಲಾಯಿತು. ಆದರೆ ಬಿಜೆಪಿ ಸರ್ಕಾರ ನೇಮಿಸಿದ ಸಮಿತಿ ಕುವೆಂಪು ಅವರ 10 ಪಠ್ಯ ಅಳವಡಿಸಿದೆ. ಕಾಂಗ್ರೆಸ್ ಪ್ರತಿಭಟನೆ ಕುವೆಂಪು ವಿರುದ್ಧವೇ ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನೆ ಮಾಡಿದೆ.

ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಕಾಂಗ್ರೆಸ್ ಪ್ರತಿಭಟನೆ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಹಿಂದಿನ ಪಠ್ಯಕ್ರಮ ಮುಂದುವರೆಸುವಂತೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ಹತ್ತನೇ ತರಗತಿಯ ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಇದ್ದ ಪಾಠವನ್ನು ಕಾಂಗ್ರೆಸ್ ಸರ್ಕಾರ ನೇಮಿಸಿದ ಸಮಿತಿ ತೆಗೆದುಹಾಕಿತ್ತು. ಇದನ್ನು ಸಮರ್ಥಿಸಿ ಪ್ರತಿಭಟನೆ ಮಾಡುತ್ತಿದ್ದೀರಾ?
ನವ ಬೆಂಗಳೂರಿನ ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಅವರ ಬಗ್ಗೆ ಇದ್ದ ಪಠ್ಯವನ್ನು ಕಾಂಗ್ರೆಸ್ ಸರ್ಕಾರ ತೆಗೆದುಹಾಕಿತ್ತು. ಈಗ ಅದೇ ಹಿಂದಿನ ಪಠ್ಯ ಮುಂದುವರೆಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದೆ. ಅಂದರೆ ಪಠ್ಯಪುಸ್ತಕದಲ್ಲಿ ಕೆಂಪೇಗೌಡರ ಚರಿತ್ರೆ ಇರಬಾರದೇ?
https://twitter.com/BJP4Karnataka/status/1534764773233283074?s=20&t=ULeO4fIeO3sDYpmXNL8z5g
ಭೂಕಂದಾಯದ ಪತ್ರಗಳಲ್ಲಿದ್ದ ಕನ್ನಡವನ್ನು ತೆಗೆದು ಪರ್ಷಿಯನ್ ಭಾಷೆ ಹೇರಿದ ಟಿಪ್ಪು ಬಗ್ಗೆ ಕನ್ನಡ ಭಾಷಾಭಿಮಾನಿ ಎಂದು ಬರಗೂರು ಸಮಿತಿ ವೈಭವಿಕರಿಸಿತ್ತು. ಇದನ್ನು ಸಮರ್ಥಿಸುವ ಸಲುವಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆಯೇ?
ಮಾನ್ಯ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ ನಾಡಿನ ಹೆಮ್ಮೆಯ ಸಂಗೊಳ್ಳಿ ರಾಯಣ್ಣ, ರಾಣಿ ಚೆನ್ನಮ್ಮ ಹಾಗೂ ಒನಕೆ ಓಬವ್ವನ ಪಾಠಗಳನ್ನು ನಿಮ್ಮದೇ ಸರ್ಕಾರ ನೇಮಿಸಿದ್ದ ಸಮಿತಿ ಪಠ್ಯದಿಂದ ತೆಗೆದುಹಾಕಿತ್ತು. ಇದನ್ನು ಬೆಂಬಲಿಸಿ ಇಂದು ಪ್ರತಿಭಟನೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದೆ.








