ಕರೀಮ್ ನಗರ, ಮೇ 31 : ಕೊರೋನಾ ವೈರಸ್ ಸೋಂಕು ಹರಡುವ ಭೀತಿಯಿಂದ ಮಕ್ಕಳು ತನ್ನ ಹೆತ್ತ ತಾಯಿಯನ್ನೇ ಮನೆಯಿಂದ ಹೊರಗೆ ಹಾಕಿದ ಘಟನೆ ತೆಲಂಗಾಣದ ಕರೀಮ್ ನಗರದಲ್ಲಿ ನಡೆದಿದೆ. ತೆಲಂಗಾಣದ ಕರೀಮ್ ನಗರದ ಕಿಸಾನ್ ನಗರದಲ್ಲಿ ಈ ಘಟನೆ ನಡೆದಿದ್ದು, 80 ವರ್ಷ ಪ್ರಾಯದ ತಾಯಿ ಸಂಬಂಧಿಕರ ಕೌಟುಂಬಿಕ ಕಾರ್ಯಕ್ರಮದ ಸಲುವಾಗಿ ಶೋಲಾಪುರಕ್ಕೆ ತೆರಳಿದ್ದರು. ಆದರೆ ಕಾರ್ಯಕ್ರಮ ಮುಗಿಸಿ ಮನೆಗೆ ಮರಳಿದ ತಾಯಿಯನ್ನು ಮನೆಯೊಳಗೆ ಸೇರಿಸದ ಮಗ ಹೊರಗೆ ಇಟ್ಟಿದ್ದಾನೆ.
ಕೌಟುಂಬಿಕ ಕಾರ್ಯಕ್ರಮದ ಸಲುವಾಗಿ ಶೋಲಾಪುರಕ್ಕೆ ತೆರಳಿದ್ದ ಅಜ್ಜಿ ಕಟ್ಟ ಶ್ಯಾಮಲಾ ಎನ್ನುವವರು ಲಾಕ್ ಡೌನ್ ಸಡಿಲಿಕೆ ಬಳಿಕ ಕರೀಮ್ ನಗರ್ ಗೆ ಹೊರಟಿದ್ದರು. ಹೈದರಾಬಾದ್ ವರೆಗೆ ಕಾರಿನಲ್ಲಿ ಬಂದ ಅಜ್ಜಿ ನಂತರ ಬಸ್ ನಲ್ಲಿ ಕರೀಮ್ ನಗರ್ ಕ್ಕೆ ಬಂದಿದ್ದರು. ನಡುವೆ ರಾಜ್ಯ ಸರಹದ್ದಿನಲ್ಲಿ ಪೊಲೀಸರು ಆಕೆಯ ಕೈಗೆ ಹೋಮ್ ಕ್ವಾರಂಟೈನ್ ಸೀಲ್ ಹಾಕಿದ್ದು ಅದೇ ಸೀಲ್ ನೊಂದಿಗೆ ಅಜ್ಜಿ ಮನೆಗೆ ಬಂದಿದ್ದರು.
ಅಜ್ಜಿಯ ಕೈನಲ್ಲಿದ್ದ ಹೋಮ್ ಕ್ವಾರಂಟೈನ್ ಸೀಲ್ ನೋಡಿದ ಮಗ ನರಸಿಂಹಚಾರಿ, ಮನೆಯೊಳಗೆ ತಾಯಿಯನ್ನು ಸೇರಿಸದೆ ಮನೆಯ ಆಚೆ ಹಾಕಿ ಮನೆ ಗೇಟ್ ಗೆ ಬೀಗ ಹಾಕಿದ್ದಾನೆ. ನಂತರ ಅಜ್ಜಿ ಕಿರಿಯ ಮಗನ ಮನೆಗೆ ತೆರಳಿದ್ದು, ಅಲ್ಲಿ ಕೂಡ ಆಕೆಯನ್ನು ಮನೆಗೆ ಸೇರಿಸಿಲ್ಲ. ಹಾಗಾಗಿ ಬೇರೆ ದಾರಿ ಕಾಣದೆ ಅಜ್ಜಿ ಮನೆಯ ಗೇಟ್ ಬಳಿಯೇ ದಿನವನ್ನು ಕಳೆದಿದ್ದಾರೆ. ಇದನ್ನು ಗಮನಿಸಿದ ನೆರೆಹೊರೆಯವರು ಮಗನಲ್ಲಿ ಈ ಬಗ್ಗೆ ಪ್ರಶ್ನಿಸಿದ್ದು ಅದಕ್ಕೆ ಆತ ನನ್ನ ಮಗಳು ಗರ್ಭಿಣಿಯಾಗಿದ್ದು, ಮನೆಯಲ್ಲಿದ್ದಾಳೆ. ತಾಯಿಯಿಂದಾಗಿ ಆಕೆಗೆ ಸೋಂಕು ಹರಡಬಹುದು ಎಂದು ವಾದ ಮಾಡಿದ್ದಾನೆ. ಕೊನೆಗೆ ಘಟನಾ ಸ್ಥಳಕ್ಕೆ ಸ್ಥಳೀಯ ಕಾರ್ಪೋರೇಟರ್ ಅಡ್ಲ ಸರಿತಾ ಅವರ ಪತಿ ಅಶೋಕ್ ಆಗಮಿಸಿ ಅಜ್ಜಿಯ ಇಬ್ಬರು ಪುತ್ರರಲ್ಲಿ ಮಾತನಾಡಿ, ಅವರನ್ನು ಸಮಾಧಾನಗೊಳಿಸಿ ಅಜ್ಜಿಯನ್ನು ಮನೆಯೊಳಗೆ ಸೇರಿಸಿದ್ದಾರೆ ಎಂದು ವರದಿಗಳು ಹೇಳಿವೆ.








