ಬೀಜಿಂಗ್ : ವಿಶ್ವಕ್ಕೆ ಕೊರೊನಾ ಎಂಬ ಹೆಮ್ಮಾರಿಯನ್ನು ಉಡುಗೊರೆಯಾಗಿ ಕೊಟ್ಟ ಚೀನಾ ಈ ವರ್ಷದ ಅಂತ್ಯಕ್ಕೆ ವ್ಯಾಕ್ಸಿನ್ ನೀಡುವುದಾಗಿ ವಾಗ್ದಾನ ಮಾಡಿದೆ. ಬೀಜಿಂಗ್ ಜೈವಿಕ ಉತ್ಪನ್ನಗಳ ಸಂಸ್ಥೆ ಹಾಗೂ ಚೀನಾದ ರಾಷ್ಟ್ರೀಯ ಬಯೋಟೆಕ್ ಗ್ರೂಪ್ ಜಂಟಿಯಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದು, ಎರಡನೇ ಹಂತದ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಈ ವರ್ಷದ ಕೊನೆಗೆ ಇಲ್ಲವೇ ಮುಂದಿನ ವರ್ಷದ ಆರಂಭಕ್ಕೆ ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.
ವಿಶ್ವದಾದ್ಯಂತ 3 ಲಕ್ಷ 65 ಸಾವಿರ ಮಂದಿಯನ್ನು ಬಲಿ ಪಡೆದ ಮಾಹಾಮಾರಿ ಕೊರೊನಾ ನಿಯಂತ್ರಣಕ್ಕೆ ಸುಮಾರು 100ಕ್ಕೂ ಹೆಚ್ಚು ಲಸಿಕೆಗಳನ್ನು ಜಗತ್ತಿನಾದ್ಯಂತ ಅಭಿವೃದ್ಧಿಪಡಿಸಲಾಗಿದೆ. ಆದರೆ ಕೇವಲ ಬೆರಳೆಣಿಕೆಯಷ್ಟು ಮಾತ್ರ ಮಾನವನ ಮೇಲೆ ಪ್ರಯೋಗಕ್ಕೆ ಒಳಪಡಿಸವ ಹಂತಕ್ಕೆ ಬಂದಿವೆ. ಅವುಗಳಲ್ಲಿ ಚೀನಾ ಅಭಿವೃದ್ಧಿ ಪಡಿಸಿದ ಲಸಿಕೆ ಮೊದಲ ಸ್ಥಾನದಲ್ಲಿ ನಿಂತಿದೆ.
ಈಗಾಗಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಲಸಿಕೆ ಕಂಡು ಹಿಡಿಯುವಲ್ಲಿ ಚೀನಾ ಯಶಸ್ವಿಯಾದರೆ ಅದನ್ನು ಜಾಗತಿಕವಾಗಿ ಪೂರೈಕೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಸದ್ಯ ಲಸಿಕೆ ಒಂದು ಹಂತಕ್ಕೆ ರೆಡಿಯಾಗಿದ್ದರೂ ಕೂಡ ಚೀನಾದ ಸಂಸ್ಥೆಗಳ ಎದುರು ದೊಡ್ಡ ಸವಾಲುಗಳಿವೆ. ಲಸಿಕೆಯ ಮೂರನೇ ಹಂತದ ಪರೀಕ್ಷೆ ಇನ್ನೂ ಯಶಸ್ವಿಯಾಗಿ ನಡೆಯಬೇಕಿದೆ. ಯಾವ ಪ್ರದೇಶದಲ್ಲಿ ಸೋಂಕು ತೀವ್ರವಾಗಿ ಹಬ್ಬುತ್ತಿದೆಯೋ ಅಲ್ಲಿ ಲಸಿಕೆಯ ಕೊನೆಯ ಪ್ರಯೋಗ ಯಶಸ್ವಿಯಾಗಬೇಕಿದೆ.








