ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ – ನೂಪುರ್ ಶರ್ಮಾಗೆ ಛೀಮಾರಿ ಹಾಕಿದ ಸುಪ್ರೀಂ ಕೋರ್ಟ್…
ಪ್ರವಾದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ. ದೇಶದ ಕ್ಷಮೆ ಯಾಚಿಸುವಂತೆ ನ್ಯಾಯಾಲಯ ನೂಪುರ್ ಶರ್ಮಾ ಅವರಿಗೆ ಸೂಚಿಸಿದೆ. ತಮ್ಮ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ತಂದಿದ್ದಾರೆ ಎಂದು ಕೋರ್ಟ್ ಹೇಳಿದೆ.
ನೂಪುರ್ ಟಿ ವಿಯಲ್ಲಿ ಬಂದು ನಿರ್ದಿಷ್ಟ ಧರ್ಮದ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಹೇಳಿದೆ. ತಮ್ಮ ಹೇಳಿಕೆಯಿಂದ ಜನರ ಆಕ್ರೋಶ ಭುಗಿಲೆದ್ದಾಗ ಅದೂ ಕೂಡ ಷರತ್ತುಗಳೊಂದಿಗೆ ಕ್ಷಮೆಯಾಚಿಸಿದ್ದಾರೆ ಎಂದು ಕೊರ್ಟ್ ಕಿಡಿ ಕಾರಿದೆ.
ನ್ಯಾಯಾಲಯದ ಖಂಡನೆಯ ನಂತರ, ನೂಪುರ್ ಶರ್ಮಾ ಪರ ವಾದ ಮಂಡಿಸಿದ ವಕೀಲ ಮಣಿಂದರ್ ಸಿಂಗ್, ನೂಪುರ್ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಮತ್ತು ಅವರು ಅದನ್ನು ಹಿಂಪಡೆದಿದ್ದಾರೆ ಎಂದು ಹೇಳಿದರು. ಈ ಕುರಿತು ನ್ಯಾಯಾಲಯವು ಟಿವಿಯಲ್ಲಿ ಬಂದು ಇಡೀ ದೇಶದ ಕ್ಷಮೆಯಾಚಿಸಬೇಕು ಎಂದು ಹೇಳಿದೆ. ಇದರೊಂದಿಗೆ ನೂಪುರ್ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಲು ನ್ಯಾಯಾಲಯ ನಿರಾಕರಿಸಿದೆ.
ನೂಪುರ್ ವಿರುದ್ಧ ದೆಹಲಿ, ಕೋಲ್ಕತ್ತಾ, ಬಿಹಾರದಿಂದ ಪುಣೆಯವರೆಗೆ ಅನೇಕ ಪ್ರಕರಣಗಳು ದಾಖಲಾಗಿವೆ. ತನ್ನ ವಿರುದ್ಧ ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ದೆಹಲಿಗೆ ವರ್ಗಾಯಿಸಬೇಕು ಎಂದು ಕೋರಿ ನೂಪುರ್ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿವಿಧ ರಾಜ್ಯಗಳಿಂದ ತನಗೆ ನಿರಂತರವಾಗಿ ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ನೂಪುರ್ ಅರ್ಜಿಯಲ್ಲಿ ತಿಳಿಸಿದ್ದರು. ತೀವ್ರ ಟೀಕೆಯೊಂದಿಗೆ ನೂಪುರ್ ಅವರ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.








