ಹೊಸದಿಲ್ಲಿ, ಮೇ 31 : ಭಾರತದಲ್ಲಿ ದೇಶದ ಭದ್ರತಾ ಹಿತಾಸಕ್ತಿಯಿಂದ ಫೈಲ್ ಹಂಚಿಕೆ ತಾಣ ವೀ ಟ್ರಾನ್ಸ್ ಫರ್ ಡಾಟ್ ಕಾಂ ಬಳಕೆಗೆ ನಿರ್ಬಂಧ ಹೇರಲಾಗಿದೆ. ಭಾರತೀಯ ದೂರ ಸಂಪರ್ಕ ಇಲಾಖೆಯು ಜನಪ್ರಿಯ ಫೈಲ್ ಹಂಚಿಕೆ ತಾಣ ವೀ ಟ್ರಾನ್ಸ್ ಫರ್ ಡಾಟ್ ಕಾಂ ಬಳಕೆಯನ್ನು ಸಾರ್ವಜನಿಕ ಭದ್ರತಾ ಹಿತಾಸಕ್ತಿಯ ಕಾರಣದಿಂದ ನಿಷೇಧ ಹೇರಲು ಸೂಚಿಸಿತ್ತು
ಈ ಮೊದಲು ಮುಂಬೈ ಮಿರರ್ ಜಗತ್ತಿನಾದ್ಯಂತ ಲಕ್ಷಾಂತರ ಬಳಕೆದಾರರನ್ನು ಹೊಂದಿರುವ ವಿ ಟ್ರಾನ್ಸ್ ಫರ್ ವೆಬ್ ತಾಣ ಹಾಗೂ ಆಪ್ ಬಳಕೆಯಿಂದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟಾಗುತ್ತದೆ, ಈ ವೆಬ್ ತಾಣ ಬಳಕೆ ಸುರಕ್ಷಿತವಾಗಿಲ್ಲ ಎಂದು ವರದಿ ಮಾಡಿತ್ತು. ಇದೀಗ ವೀ ಟ್ರಾನ್ಸ್ ಫರ್ ಡಾಟ್ ಕಾಂ ಅನ್ನು ಭಾರತದಲ್ಲಿ ಸಂಪೂರ್ಣವಾಗಿ ನಿಷೇಧಿಸಿದ್ದು, ಇನ್ನೆರಡು ಯುಆರ್.ಎಲ್ ಬಳಕೆಗೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ
ವೀ ಟ್ರಾನ್ಸ್ ಫರ್ ಡಾಟ್ ಕಾಂ ನಲ್ಲಿ ಸುಮಾರು 2 ಜಿಬಿ ತನಕ ಫೋಟೊ, ವಿಡಿಯೋ ಡೇಟಾ ಹಂಚಿಕೆ ಮಾಡಬಹುದಾಗಿದ್ದು, ಇಮೇಲ್ ಐಡಿ ಮುಖಾಂತರ ಇನ್ನೊಬ್ಬರಿಗೆ ಹಂಚಿಕೆ ಮಾಡಬಹುದಾಗಿದೆ. ಅದಕ್ಕಾಗಿ ಪ್ರತ್ಯೇಕ ಖಾತೆ ಹೊಂದುವ ಅಗತ್ಯವಿಲ್ಲ ಮತ್ತು ಇದು ಉಚಿತ ಸೌಲಭ್ಯವಾಗಿದೆ.
ವೀ ಟ್ರಾನ್ಸ್ ಫರ್ ಬಳಸಿ ಪೋರ್ನೋಗ್ರಾಫಿ, ಮಾಲ್ವೇರ್, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಡೇಟಾ ಹಂಚಿಕೆಯಾಗುತ್ತಿದೆ ಎಂಬ ದೂರು ಕೇಳಿ ಬಂದಿದ್ದು, ವಿ ಟ್ರಾನ್ಸ್ ಫರ್ ನಲ್ಲಿ ಹಂಚಿಕೆಯಾಗುವ ಡೇಟಾಗೂ ಮತ್ತು ಸಂಸ್ಥೆಗೂ ಸಂಬಂಧವಿಲ್ಲವೆಂದೂ, ವೀ ಟ್ರಾನ್ಸ್ ಫರ್ ಕೇವಲ ವಾಹಕ ಎಂದು ಫೈಲ್ ಹಂಚಿಕೆ ತಾಣ ಸಂಸ್ಥೆ ಸ್ಪಷ್ಟನೆ ನೀಡಿತ್ತು.








