ವಾಷಿಂಗ್ಟನ್, ಮೇ 31 : ಪೊಲೀಸ್ ಅಧಿಕಾರಿಯೊಬ್ಬರು ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿ ಮಿನ್ನಿಯಾಪೊಲೀಸ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದೆ ಎಂದು ವರದಿಯಾಗಿದೆ.
ಪೊಲೀಸ್ ಅಧಿಕಾರಿ ಡೆರಿಕ್ ಚವಿನ್ ಎಂಬಾತ ಕಪ್ಪು ಜನಾಂಗದ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಂಧಿಸಿದ್ದು, ನಂತರ ಪೊಲೀಸ್ ಅಧಿಕಾರಿ ಜಾರ್ಜ್ ಫ್ಲಾಯ್ಡ್ ನ ಕುತ್ತಿಗೆಗೆ ಮೊಣಕಾಲನ್ನು ಸುಮಾರು ಎಂಟು ನಿಮಿಷಕ್ಕೂ ಹೆಚ್ಚು ಕಾಲ ಒತ್ತಿ ಹಿಡಿದಿದ್ದು, ಇದರಿಂದಾಗಿ ಫ್ಲಾಯ್ಡ್ ನ ಸಾವು ಸಂಭವಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಮಿನ್ನಿಯಾಪೊಲೀಸ್ ನಲ್ಲಿ ಬೀದಿಗಿಳಿದ ಪ್ರತಿಭಟನಾಕಾರರು ಲಾಸ್ ಏಂಜಲೀಸ್ ನಿಂದ ನ್ಯೂಯಾರ್ಕ್ ವರೆಗೆ ಶಾಂತಿಯುತವಾಗಿ ಸಾಗುತ್ತಿದ್ದು ನಂತರ ತೀವ್ರ ಹಿಂಸಾಚಾರಕ್ಕೆ ತಿರುಗಿದೆ. ಅಟ್ಲಾಂಟಾದಲ್ಲಿ, ಪ್ರತಿಭಟನಾಕಾರರು ಪೊಲೀಸ್ ಕಾರ್ ಗೆ ಬೆಂಕಿ ಹಚ್ಚಿದರು ಮತ್ತು ಕಟ್ಟಡಗಳ ಕಿಟಕಿಗಳನ್ನು ಒಡೆದು ಹಾಕಿದರು.
ಕಳೆದ ಶನಿವಾರದಿಂದ ಆರಂಭವಾಗಿದ್ದ ಜನಾಂಗೀಯ ಪ್ರತಿಭಟನೆ ಇದೀಗ ಅಮೆರಿಕದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಏಕಾಏಕಿ ಪ್ರತಿಭಟನಾಕಾರರು ಬೀದಿಗಿಳಿದು ಪೊಲೀಸರ ಕಾರುಗಳಿಗೆ ಬೆಂಕಿ ಹಚ್ಚಿದ್ದರು, ಅಂಗಡಿಗಳನ್ನು ಲೂಟಿಗೈದಿದ್ದು ಆ ಸಮಯದಲ್ಲಿ ಅಟ್ಲಾಂಟಾ ಮತ್ತು ಲಾಸ್ ಏಂಜಲೀಸ್ ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ.
ಮಿನ್ನಿಯಾಪೊಲೀಸ್ ನಲ್ಲಿ ಆರಂಭವಾದ ಜನಾಂಗೀಯ ಉದ್ವಿಗ್ನ ಪ್ರತಿಭಟನೆ ಹಿಂಸಾತ್ಮಕ ಸ್ವರೂಪ ಪಡೆದು ಅಮೆರಿಕದ ಪ್ರಮುಖ ನಗರವಾದ ಲಾಸ್ ಏಂಜಲೀಸ್, ಚಿಗಾಕೋ ಸೇರಿದಂತೆ ಹಲವು ನಗರಗಳಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿಭಟನೆ ತೀವ್ರ ಹಿಂಸಾರೂಪಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಅಮೆರಿಕದ ಸುಮಾರು 25 ಪ್ರಮುಖ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಯಾರೂ ಮನೆಯಿಂದ ಹೊರಬರಬಾರದು ಎಂದು ಪೊಲೀಸರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ತೀವ್ರ ಸ್ವರೂಪ ಪಡೆದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು ತಡೆಗಟ್ಟಿ ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ನ್ಯಾಷನಲ್ ಗಾರ್ಡ್ ಅನ್ನು ಕರೆಸಲು ಸೂಚನೆ ನೀಡಿರುವುದಾಗಿ ವರದಿಗಳು ತಿಳಿಸಿದೆ.








