ಬೆಂಗಳೂರು : ಬಸ್ ನಿಲ್ದಾಣಗಳಲ್ಲಿ ಮತ್ತು ಡಿಪೋಗಳಲ್ಲಿ ಹಾಗೂ ಆವರಣಗಳಲ್ಲಿ ಧೂಮಪಾನ ಸೇವಿಸಬಾರದು ಮತ್ತು ಮಾರಾಟ ಮಾಡಬಾರದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಾರಿಗೆ ಇಲಾಖೆ,ಕೆ .ಎಸ್. ಆರ್. ಟಿ. ಸಿ. ಯು ಸಾರ್ವಜನಿಕ ಸೇವಾ ಸಂಸ್ಥೆಯಾಗಿದೆ. ಹಾಗಾಗಿ ಇಲ್ಲಿ ಸಿಬ್ಬಂದಿಗಳು ಹಾಗೂ ಪ್ರಯಾಣಿಕರೇ ಮೂಲಾಧಾರವಾಗಿದ್ದಾರೆ. ಸಾರ್ವಜನಿಕ ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಸಂಸ್ಥೆಯ ಬಸ್ ನಿಲ್ದಾಣಗಳು,ಬಸ್ಸುಗಳು, ಘಟಕಗಳು ಹಾಗೂ ಆವರಣಗಳಲ್ಲಿ ಧೂಮಪಾನ ತಂಬಾಕು ಮಾರಾಟ ಮತ್ತು ಸೇವನೆಯನ್ನು ಈಗಾಗಲೇ ನಿಷೇದಿಸಲಾಗಿದೆ.
ಬಸ್ ನಿಲ್ದಾಣದ ಆವರಣದಲ್ಲಿರುವ ಮುಂಗಟ್ಟುಗಳಲ್ಲಿ ಸಿಗರೇಟು ಮತ್ತು ಇನ್ನಿತರೆ ತಂಬಾಕು ಪದಾರ್ಥಗಳನ್ನು ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಧೂಮಪಾನ ನಿಷೇಧ ಪ್ರದೇಶ ,ಇಲ್ಲಿ ಧೂಮಪಾನ ಮಾಡುವುದು ಅಪರಾಧ, ಉಲ್ಲಂಘನೆಯಾದಲ್ಲಿ ರೂ.200 ದಂಡ ವಿಧಿಸಲಾಗುವುದು ಎಂಬುದನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶಿಸಲಾಗಿದೆ. ಉಲ್ಲಂಘಿಸದಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗುತ್ತಿದೆ.
ತಂಬಾಕು ಕಾಯಿದೆ ಉಲ್ಲಂಘನೆಯ ಮಾಡಿ ಸಂಸ್ಥೆಯ ಬಸ್ಸುಗಳು, ಬಸ್ಸು ನಿಲ್ದಾಣ, ಘಟಕಗಳು, ಸಂಸ್ಥೆಯ ಆವರಣದಲ್ಲಿ ಧೂಮಪಾನ ಮಾಡಿರುವ ಕಾರಣಕ್ಕೆ ಏಪ್ರಿಲ್ 2019 ರಿಂದ ಮಾರ್ಚ್ 2020 ರವರೆಗೆ ಒಟ್ಟು 17661 ಜನರಿಂದ ರೂ.35,23,200 ದಂಡ ವಿಧಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ಧೂಮಪಾನ ಮಾಡುವುದನ್ನು, ತಪ್ಪಿಸಲು ಹಾಗೂ ಅವರ ಆರೋಗ್ಯದ ದೃಷ್ಟಿಯಿಂದ ಕಟ್ಟು ನಿಟ್ಟಿನ ಕ್ರಮ ಜಾರಿ ಮಾಡಲಾಗಿದೆ ಎಂದು ಸಾರಿಗೆ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ. ಸಿ.ಕಳಸದ ತಿಳಿಸಿದ್ದಾರೆ.








