ಯಾರದೋ ದುಡ್ಡು ಸಿದ್ದರಾಮಯ್ಯನವರ ಜಾತ್ರೆ : BJP ವ್ಯಂಗ್ಯ
ಬೆಂಗಳೂರು : ಮಾಜಿ ಸಿಎಂ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂಪಾಯಿ ಪರಿಹಾರ ಧನವನ್ನು ಮಹಿಳೆಯೊಬ್ಬರು ಎಸೆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಈ ಸಂಬಂಧ ಟ್ವಿಟ್ಟರ್ ನಲ್ಲಿ ಬಿಜೆಪಿ, ಯಾರದೋ ದುಡ್ಡು ಸಿದ್ದರಾಮಯ್ಯನವರ ಜಾತ್ರೆ ಎಂದು ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮೋತ್ಸವದ ಹೆಸರಿನಲ್ಲಿ ಎತ್ತಿದ ಚಂದಾ ಹಣವನ್ನು ಸಿದ್ದರಾಮಯ್ಯ ದರ್ಪ ಪ್ರದರ್ಶನಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಸಿದ್ದರಾಮಯ್ಯನವರ ಜಾತ್ರೆ..
ಸಿದ್ದರಾಮಯ್ಯ ಅವರ ಅತಿ ತುಷ್ಠೀಕರಣ ನಡೆ ಮಹಿಳೆಗೂ ಬೇಸರ ತರಿಸಿದೆ. ಹಣ ನೀಡುವ ಮೂಲಕ ಸಮಾಧಾನ ಮಾಡಲು ಯತ್ನಿಸಿದ ಮಾಜಿ ಮುಖ್ಯಮಂತ್ರಿಗಳಿಗೆ “ನ್ಯಾಯ ಕೊಡಿಸಿ, ನಿಮ್ಮ ಹಣ ಬೇಡ” ಎಂದು ಮಹಿಳೆ ತಿರಸ್ಕರಿಸಿದ್ದಾರೆ. ಇದನ್ನು ನೋಡಿದಾಗ ಈ ತಿರಸ್ಕಾರದ ಭಾವನೆ ರಾಜ್ಯದ ಎಲ್ಲಾ ಜನರಲ್ಲಿ ಮೂಡಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ.
https://twitter.com/BJP4Karnataka/status/1547883272478212104?s=20&t=ny1LMz7euUrol2Ca1Qnfcw
ನೆರೆಮನೆಗೆ ಬೆಂಕಿ ಬಿದ್ದರೆ ಚಳಿ ಕಾಯಿಸಿಕೊಳ್ಳುವ ಸಿದ್ದರಾಮಯ್ಯ ಅವರ ಮನಃಸ್ಥಿತಿಗೆ ಈ ಮಹಿಳೆ ಕಪಾಳಮೋಕ್ಷ ಮಾಡಿರುವುದು ಸಿದ್ದರಾಮಯ್ಯ ಅವರ ತುಷ್ಠೀಕರಣ ನೀತಿಗೆ ಸಿಕ್ಕ ಪ್ರತಿಫಲವಾಗಿದೆ. ಹಣ ನೀಡಿ ಧರ್ಮ ಸಂಘರ್ಷ ಸೃಷ್ಟಿಸಲು ಸಿದ್ದರಾಮಯ್ಯ ನಡೆಸಿದ ಪ್ರಯತ್ನ ವಿಫಲವಾಗಿದೆ.
ವಿರೋಧ ಪಕ್ಷದ ನಾಯಕರೇ, ನಾಳೆ ನಿಮ್ಮ ಪಟಾಲಂ ಮಾಡುವ ಸಿದ್ದರಾಮೋತ್ಸವ ನಂತರ ಇದೇ ಸ್ಥಿತಿ ಉದ್ಭವವಾಗುವ ಲಕ್ಷಣ ದಟ್ಟವಾಗಿದೆ. ಚಂದಾ ಎತ್ತಿ ‘ಬಂಡವಾಳ‘ ಹೂಡಿ ಮಾಡಿದ ಉತ್ಸವ ತಿರುಗುಬಾಣವಾಗುವುದೇ? ಸಿದ್ದರಾಮೋತ್ಸವದ ಆರಂಭಿಕ ಲಕ್ಷಣವೇ ಹೀಗಾದರೇ, ಅಂತ್ಯ ಹೇಗಿರಬಹುದು ಎಂದು ಪ್ರಶ್ನಿಸಿದೆ.








