ಬೆಂಗಳೂರು : ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಕಾರ್ಯಕ್ಕೆ ಅಡ್ಡಿಪಡಿಸಿದ ವಿಧಾನಸಭೆ ಸ್ಪೀಕರ್ ಅವರ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡನೆ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅವ್ಯವಹಾರ ಆರೋಪ ಬಂದರೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆ ಬಗ್ಗೆ ಪರಿಶೀಲನೆ ನಡೆಸುವ ಹಕ್ಕಿದೆ. ಈ ವಿಚಾರದಲ್ಲಿ ಸ್ಪೀಕರ್ ಅವರು ಹಸ್ತಕ್ಷೇಪ ಮಾಡಿದ್ದೇಕೆಂಬುದೇ ಗೊತ್ತಾಗುತ್ತಿಲ್ಲ. ಸರ್ಕಾರ ಪಾರದರ್ಶಕವಾಗಿರಬೇಕು. ಈಗ ಆರ್.ಟಿ.ಐ ಮೂಲಕ ಮಾಹಿತಿ ಸಿಗುವಾಗ ಸ್ಪೀಕರ್ ಅವರು ಪರಿಶೀಲನೆಗೆ ಅಡ್ಡಿ ಪಡಿಸಿದ್ದೇಕೆ? ಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ? ಈ ಸರ್ಕಾರದಲ್ಲೇ ಸಚಿವರು ಅಧಿಕಾರಿಗಳ ವಿರುದ್ಧ ದೂರಿರುವುದನ್ನು ನಾವು ನೋಡಿದ್ದೇವೆ. ಮುಖ್ಯಮಂತ್ರಿಗಳಿಗೂ ಅನೇಕ ದೂರುಗಳು ಹೋಗಿವೆ. ಅವರೇ ಅಧಿಕಾರಿಗಳ ಬದಲಾವಣೆ ಮಾಡಿರುವುದನ್ನು ನೋಡಿದ್ದೇವೆ.
ಈ ಸಮಿತಿ ಸರ್ಕಾರಕ್ಕೆ ಸಹಾಯ ಮಾಡಲು ಇದೆಯೇ ಹೊರತು ತೊಂದರೆ ನೀಡಲು ಅಲ್ಲ. ಸರ್ಕಾರದ ಅನುಮತಿ ಮೇಲೆ ಸ್ಪೀಕರ್ ಅವರೇ ರಚಿಸಿರುವ ಸಮಿತಿ ಇದು. ಈ ವಿಚಾರದಲ್ಲಿ ಸ್ಪೀಕರ್ ವಿರುದ್ಧ ಹಕ್ಕುಚ್ಯುತಿ ನಿರ್ಣಯ ಮಂಡಿಸುವ ವಿಚಾರವಾಗಿ ಶಾಸಕಾಂಗ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.a








