ಅದು 2006ರ ಫೈಸಲಾಬಾದ್ ಟೆಸ್ಟ್ ಪಂದ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಜಿದ್ದಾಜಿದ್ದಿನ ಪಂದ್ಯವೂ ಹೌದು. ರಾವಲ್ಪಿಂಡಿ ಎಕ್ಸ್ ಪ್ರೆಸ್ ಶೋಯಿಬ್ ಅಖ್ತರ್ 150-160 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರು. ಅಖ್ತರ್ ಬೌಲಿಂಗ್ ದಾಳಿಗೆ ಟೀಮ್ ಇಂಡಿಯಾದ ಬ್ಯಾಟ್ಸ್‍ಮೆನ್‍ಗಳು ಕೂಡ ಕಂಗೆಡುತ್ತಿದ್ದರು. ಶಾರ್ಟ್‍ಬಾಲ್, ಬೌನ್ಸರ್ ಹೀಗೆ ಅಖ್ತರ್ ತನ್ನ ಬತ್ತಳಿಕೆಯಲ್ಲಿರುವ ಎಲ್ಲಾ ಅಸ್ತ್ರಗಳನ್ನು ಬಳಸಿಕೊಂಡು ಟೀಮ್ ಇಂಡಿಯಾಗೆ ತಲೆನೋವಾಗಿ ಪರಿಣಮಿಸಿದ್ದರು.
ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಮೊದಲ ಇನಿಂಗ್ಸ್ ನಲ್ಲಿ 588 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ 281 ರನ್‍ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆಗ ಧೋನಿಗೆ ಜೊತೆಯಾದ ಇರ್ಫಾನ್ ಪಠಾಣ್ ಅವರು 210ರನ್‍ಗಳ ಜೊತೆಯಾಟವನ್ನು ಆಡಿದ್ದರು. ಆ ಪಂದ್ಯದಲ್ಲಿ ಧೋನಿ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದರು. ಅಲ್ಲದೆ ಇನಿಂಗ್ಸ್ ಮುನ್ನಡೆ ಪಡೆದುಕೊಂಡ ಟೀಮ್ ಇಂಡಿಯಾ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯ್ತು.
ಇದೀಗ ಇರ್ಫಾನ್ ಪಠಾಣ್ ಆ ಪಂದ್ಯದಲ್ಲಿ ನಡೆದಿದ್ದ ಒಂದು ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಶೋಯಿಬ್ ಅಖ್ತರ್‍ಗೆ ಸ್ಲೆಡ್ಜಿಂಗ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ನಾನು ಬ್ಯಾಟಿಂಗ್ ಮಾಡಲು ಹೋದಾಗ ಶೋಯಿಬ್ ಅಖ್ತರ್ ಬೌಲಿಂಗ್ ಮಾಡುತ್ತಿದ್ದರು. ಶೋಯಿಬ್ ಶರ ವೇಗದಲ್ಲಿ ಬೌಲಿಂಗ್ ಮಾಡತ್ತಿದ್ದರು. ಆಗ ನಾನು ಧೋನಿ ಜೊತೆಯಾದಾಗ ಸಹಜವಾಗಿ ಪಿಚ್ ಹೇಗೆ ವರ್ತಿಸುತ್ತಿದೆ ಅಂತ ಕೇಳಿದೆ. ಅದಕ್ಕೆ ಧೋನಿ ಅಂತಹುದ್ದೇನಿಲ್ಲ. ನೀನು ನಿನ್ನ ಆಟವಾಡು ಎಂದು ಹೇಳಿದ್ದರು.
ಅದು ನಾನು ಅಖ್ತರ್ ಎದುರಿಸಿದ್ದ ಮೊದಲ ಎಸೆತ. ನನ್ನನ್ನು ಗಲಿಬಿಲಿಗೊಳಿಸಲು ಬೌನ್ಸರ್ ಹಾಕಿದ್ದರು. ಕಣ್ಣ ಮುಂದೆನೇ ಚೆಂಡು ಹೋಗುತ್ತಿತ್ತು. ಆ ವೇಗಕ್ಕೆ ಆ ಎಸೆತವನ್ನು ನೋಡಲು ಕೂಡ ಆಗಲಿಲ್ಲ. ಹೀಗೆ ಬೌನ್ಸರ್ ಮೇಲೆ ಬೌನ್ಸರ್ ಎಸೆಯುತ್ತಿದ್ದರು ಅಖ್ತರ್. ಅಖ್ತರ್ ಮತ್ತೆ ಹೊಸ ಸ್ಪೆಲ್ ನೊಂದಿಗೆ ದಾಳಿ ಮಾಡಲು ಮುಂದಾದ್ರು. ಅಖ್ತರ್ ಪದೇ ಪದೇ ಸ್ಲೆಡ್ಜಿಂಗ್ ಮಾಡುತ್ತಿದ್ದರು. ನಮ್ಮ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿದ್ದರು. ಆಗ ನಾನು ಧೋನಿ ಬಳಿ ಬಂದು, ಅಖ್ತರ್‍ಗೆ ನಾನು ಸ್ಲೆಡ್ಜಿಂಗ್ ಮಾಡುತ್ತೇನೆ. ನೀನು ಸುಮ್ಮನೆ ನಗ್ತಾ ಇರು ಅಂದಿದ್ದೆ ಎಂದು ಇರ್ಫಾನ್ ಆ ದಿನವನ್ನು ನೆನಪು ಮಾಡಿಕೊಂಡು ಮತ್ತೊಮ್ಮೆ ನಗ್ತಾ ಇದ್ದರು.
ಅಖ್ತರ್ ರಿವರ್ಸ್ ಸ್ವಿಂಗ್, ಬೌನ್ಸರ್, ಶಾರ್ಟ್ ಬಾಲ್ ಮಾಡುತ್ತ ಮತ್ತೆ ಸ್ಲೆಡ್ಜಿಂಗ್ ಮಾಡುತ್ತಿದ್ದರು. ಆಗ ಮಾತ್ರ ನಾನು ಸುಮ್ಮನಿರಲಿಲ್ಲ. ನಾನು ಅಖ್ತರ್ ಜೊತೆ ವಾಕ್ಸಮರ ನಡೆಸಿದ್ದೆ. ನೀನು ಇದೇ ಲಯದಲ್ಲಿ, ಇದೇ ಸ್ಪೀಡ್ ನಲ್ಲಿ ಮುಂದಿನ ಸ್ಪೆಲ್ ಕೂಡ ಬೌಲಿಂಗ್ ಮಾಡುತ್ತೀಯಾ ಅಂತ ಕೇಳಿದ್ದೆ. ಆಗ ಅಖ್ತರ್ ಸಿಟ್ಟು ಮಾಡಿಕೊಂಡು ನಿನ್ನ ವಿಕೆಟ್ ಅನ್ನು ಪಡೆಯುತ್ತೇನೆ ಎಂದು ನನಗೆ ಮರು ಉತ್ತರ ನೀಡಿದ್ರು. ಆಗ ನಾನು ಹೇಳಿದ್ದೆ. ನಿನ್ನ ಕೈಯಲ್ಲಿ ಅದು ಸಾಧ್ಯವಿಲ್ಲ. ನಾನು ಕೂಡ ನಿಜವಾದ ಪಠಾಣ್ ಅಂತ. ನೀನು ನಿನ್ನ ಪಾಡಿಗೆ ಬೌಲಿಂಗ್ ಮಾಡು. ಹೆಚ್ಚು ಮಾತನಾಡಬೇಡ ಅಂತ ಅಂದಿದ್ದೆ ಎಂದು ಈ ಸಮಯದಲ್ಲಿ ಆ ಘಟನೆಯನ್ನು ಮೆಲುಕು ಹಾಕಿಕೊಂಡ್ರು.
ನನ್ನ ಮಾತುಗಳನ್ನು ಕೇಳಿಸಿಕೊಂಡ ಅಖ್ತರ್ ಮತ್ತಷ್ಟು ಕುಪಿತರಾದ್ರು. ಮುಂದಿನ ಎಸೆತ ಮತ್ತೆ ಬೌನ್ಸರ್ ಹಾಕಿದ್ದರು. ನಾನು ಅವರಿಂದ ಆ ಎಸೆತವನ್ನು ನಿರೀಕ್ಷೆ ಮಾಡಿದ್ದೆ. ಸುಮ್ಮನೆ ಆ ಎಸೆತವನ್ನು ಬಿಟ್ಟುಬಿಟ್ಟೆ. ಈ ನಡುವೆ ನಾನು ಧೋನಿ ಬ್ಯಾಟಿಂಗ್ ಮಾಡುವಾಗ ಕೆಲವೊಂದು ಮಾತುಗಳನ್ನು ಹೇಳ್ತಾ ಇದ್ದೇವು. ಪಿಚ್ ತೇವಗೊಂಡಿದೆ. ಇನ್ನು ಸ್ವಲ್ಪ ಶಾರ್ಟ್ ಆಗಿ ಬೌಲಿಂಗ್ ಮಾಡಬೇಕು ಎಂದು ಹೇಳ್ತಾ ಇದ್ದಾಗ ಅಖ್ತರ್ ಸಿಟ್ಟಿನಿಂದಲೇ ಬೌಲಿಂಗ್ ಮಾಡುತ್ತಿದ್ದರು. ಹೀಗೆ ಅವರ ಜೊತೆ ಮಾತಿನ ಚಕಮಕಿ ನಡೆಸಿಕೊಂಡು ನಾನು ಮತ್ತು ಧೋನಿ ಬ್ಯಾಟಿಂಗ್ ಮಾಡ್ತಾ ಟೀಮ್ ಇಂಡಿಯಾವನ್ನು ಅಪಾಯದಿಂದ ಪಾರು ಮಾಡಿದ್ದೇವೆ ಎಂಬ ವಿಷಯವನ್ನು ಇರ್ಫಾನ್ ಪಠಾಣ್ ಬಹಿರಂಗಪಡಿಸಿದ್ರು.








