ಮುಂಬೈ, ಜೂನ್ 2 : ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಸಿಗದೆ ವೇಗವಾಗಿ ಹರಡುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಹೆಚ್ಚಾಗುತ್ತಿದೆ. ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 70,013 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 2,362 ಜನರು ಮೃತರಾಗಿದ್ದಾರೆ. 36 ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದ್ದು, 28,081 ಮಂದಿ ಗುಣಮುಖರಾಗಿದ್ದಾರೆ.
ಅದರಲ್ಲೂ ವಾಣಿಜ್ಯ ನಗರ ಮುಂಬೈ ನಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು, 40 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಈ ನಿಟ್ಟಿನಲ್ಲಿ ಕೇರಳ ಸರ್ಕಾರ ಮುಂಬೈನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಸಹಾಯಹಸ್ತ ಚಾಚಿದೆ.
ಕೇರಳದಿಂದ 100 ವೈದ್ಯರು ಹಾಗು 50 ನರ್ಸ್ಗಳು ಮುಂಬೈಗೆ ತೆರಳಲಿದ್ದು, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಿದ್ದಾರೆ ಎಂದು ಸಚಿವ ಥಾಮಸ್ ಐಸಾಕ್ ತಿಳಿಸಿದ್ದಾರೆ. ಈಗಾಗಲೇ 16 ಜನರ ವೈದ್ಯರ ತಂಡ ಮುಂಬೈ ತಲುಪಿದ್ದು, ಮುಂಬೈನ ಅಂಧೇರಿ ಪ್ರದೇಶದಲ್ಲಿರುವ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಉಳಿದ ವೈದ್ಯರು ಮತ್ತು ನರ್ಸ್ ಗಳು ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜಿನ ಉಪ ಅಧೀಕ್ಷಕ ಡಾ.ಸಂತೋಷ್ ಕುಮಾರ್ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಮುಂಬೈಗೆ ತೆರಳಲಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಭಾನುವಾರ ‘ಮಿಷನ್ ಬೆಗಿನ್ ಅಗೈನ್’ ಘೋಷಣೆಯಡಿ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಜೂನ್ 5ರಿಂದ ಮಾಲ್ಗಳನ್ನು ಹೊರತುಪಡಿಸಿ ಅಂಗಡಿಗಳು, ಮಾರುಕಟ್ಟೆಗಳ ಕಾರ್ಯಾಚರಣೆಗೆ ಸಮ-ಬೆಸ ಆಧಾರದಲ್ಲಿ ಅನುಮತಿ ನೀಡಲಾಗುವುದು ಎಂದು ತಿಳಿಸಲಾಗಿದ್ದು, ಹಂತಹಂತವಾಗಿ ನಿರ್ಬಂಧಗಳನ್ನು ಸಡಿಲಿಸಲಾಗುವುದು ಎಂದು ತಿಳಿಸಿದೆ. ಜೂನ್ 8ರಿಂದ ಶೇ 10ರಷ್ಟು ಉದ್ಯೋಗಿಗಳಿಗೆ ಕಛೇರಿಯಲ್ಲಿ ಕಾರ್ಯ ನಿರ್ವಹಿಸಲು ಖಾಸಗಿ ಕಚೇರಿಗಳಿಗೆ ಅನುಮತಿ ನೀಡಲಾಗಿದ್ದು, ಕಂಟೈನ್ಮೆಂಟ್ ವಲಯಗಳನ್ನು ಈ ವಿನಾಯಿತಿಗಳಿಂದ ಹೊರಗಿಡಲಾಗಿದೆ.
ಹೊರಾಂಗಣ ದೈಹಿಕ ಚಟುವಟಿಕೆಗಳು, ಬೆಳಗ್ಗಿನ ವಾಯುವಿಹಾರ, ಸೈಕ್ಲಿಂಗ್ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಪ್ಲಂಬರ್, ಎಲೆಕ್ಟ್ರೀಷಿಯನ್ ಮತ್ತಿತರ ಸ್ವ ಉದ್ಯೋಗಿಗಳಿಗೆ ಲಾಕ್ಡೌನ್ನಿಂದ ವಿನಾಯಿತಿ ನೀಡಲಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ ಒಟ್ಟು 1,90,535 ಕೊರೊನಾ ಸೊಂಕು ಪ್ರಕರಣಗಳು ಪತ್ತೆಯಾಗಿದ್ದರೆ, 5,394 ಜನರು ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತ್ಯಂತ ಹೆಚ್ಚಿನ ಕೊರೊನಾ ಪ್ರಕರಣಗಳು ಮಹಾರಾಷ್ಟ್ರದಲ್ಲಿ ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿ ತಮಿಳುನಾಡು ಇದ್ದು 22,333 ಮಂದಿ ಕೊರೊನಾ ಸೋಂಕಿತರು ಇದ್ದಾರೆ.








